ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿರೋ ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಟಾಪನೆಗೆ ಆಯ್ಕೆಯಾಗಿದೆ. ಮೂರು ಮೂರ್ತಿಗಳನ್ನ ಆಯ್ಕೆ ಮಾಡಿ ಇರಿಸಲಾಗಿತ್ತು.. ಇವುಗಳಲ್ಲಿ ಒಂದನ್ನ ಫೈನಲ್ ಮಾಡೋದಾಗಿಯೂ ರಾಮಮಂದಿರ ಟ್ರಸ್ಟ್ ತಿಳಿಸಿತ್ತು..ಅದ್ರಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವ ಮೂರ್ತಿ ಆಯ್ಕೆಯಾಗಿರೋದು ಇದೀಗ ರಾಜ್ಯದ ಜನತೆಗೆ ಸಂತಸ ತಂದಿದೆ.. ಅದ್ರಲ್ಲೂ ಯೋಗಿರಾಜ್ ಕುಟುಂಬದಲ್ಲಂತೂ ಸಂಭ್ರಮವೋ ಸಂಭ್ರಮ.
ಮೈಸೂರಿನ ಶಿಲ್ಪಿ ಅರುಣ್ ರಾಜ್ ಕೆತ್ತನೆ ಮಾಡಿರುವ ಮೂರ್ತಿಯನ್ನ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಂತಿಮಗೊಳಿಸಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಈ ಬಗ್ಗೆ ಅರುಣ್ ಯೋಗಿರಾಜ್ ಪತ್ನಿ ವಿಜೇತ ಮಾತನಾಡಿ ನಾನು ಮೂರ್ತಿ ಮಾಡಲಿಲ್ಲ ದೇವರೇ ಮೂರ್ತಿಯನ್ನು ಮಾಡಿಸಿದ್ದು ಎಂದು ಅರುಣ್ ಹೇಳುತ್ತಿದ್ದರು ಎಂಬುದಾಗಿ ತಿಳಿಸಿದ್ದಾರೆ. ಕೆತ್ತನೆ ಶುರುಮಾಡಿದ ದಿನದಿಂದಲೇ ಯೋಗಿರಾಜ್ ಮೂರ್ತಿಯೇ ಆಯ್ಕೆಯಾಗಬಹುದು ಅನಿಸಿತ್ತು. ಅರುಣ್ ಕುಟುಂಬದ ಹೆಸರನ್ನು ಉಳಿಸಿದ್ದಾರೆ. ನಮಗೆ ಇದು ಹೆಮ್ಮೆಯ ವಿಚಾರ… ಅರುಣ್ ತಂದೆ ಹಾಗೂ ತಾತ ಇಬ್ಬರೂ ಶಿಲ್ಪಿಗಳೇ… ತಂದೆ ರಾಷ್ಟ್ರೀಯ ಪ್ರಶಸ್ತಿ ವಿಜೇತರು ಎಂದು ವಿಜೇತ ಹೇಳಿದ್ದಾರೆ.
ರಾಮಲಲ್ಲಾ ಮೂರ್ತಿ ಬಹಳ ಸುಂದರವಾಗಿ ಮೂಡಿ ಬಂದಿದೆ. ಐದು ವರ್ಷದ ಬಾಲಕನ ರೀತಿ ಭಾವ ಇದೆ. ಅದನ್ನು ಕೆತ್ತನೆ ಮಾಡುವ ಸಂದರ್ಭದಲ್ಲಿ ಅರುಣ್ ಸಾಕಷ್ಟು ಅಧ್ಯಯನ ಮಾಡಿದ್ದರು. ಮಕ್ಕಳ ಭಾವ, ದೇಹದ ರೂಪವನ್ನು ಗಮನಿಸುತ್ತಿದ್ದರು. ಮೂರ್ತಿ ಕೆತ್ತನೆ ಬಹಳ ಕಷ್ಟದ ಕೆಲಸವಾಗಿತ್ತು. ಕಾಲ್ಪನಿಕವಾಗಿದ್ದರಿಂದ ಹೇಗೆ ಮೂಡಿ ಬರಬಹುದು ಅಂತ ಗೊತ್ತಿರಲಿಲ್ಲ ಎಂದರು. ಈ ಮಧ್ಯೆ, ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವ ಮೂರ್ತಿ ಆಯ್ಕೆಯಾಗಿರುವುದಕ್ಕೆ ಅವರ ತಾಯಿ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ಕಳೆದ ಆರು ತಿಂಗಳು ಆತ ಏನು ಮಾಡಿದ್ದನೋ ಅದಕ್ಕೆ ಈಗ ಫಲಿತಾಂಶ ಬಂದಿದೆ. ನನಗೆ ತುಂಬಾ ಖುಷಿಯಾಗಿದೆ ಎಂದು ಅವರು ಹೇಳಿದರು.
ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವ ಮೂರ್ತಿಯೇ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಲಿದೆ ಎಂಬುದು ಈ ಹಿಂದೆಯೇ ಬಹಿರಂಗಗೊಂಡಿತ್ತು. ಆದರೆ, ಅಧಿಕೃತ ಘೋಷಣೆಯಾಗಿರಲಿಲ್ಲ. ಈ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿನ್ನೆ ಸೋಮವಾರ ಅಧಿಕೃತ ಘೋಷಣೆ ಮಾಡಿತ್ತು. ಒಟ್ಟಾರೆ, ಮೈಸೂರು ಶಿಲ್ಪಿಯ ಈ ಸಾಧನೆ ಇಡೀ ರಾಜ್ಯಕ್ಕೆ ಹೆಮ್ಮೆ ತಂದಿರೋದಂತೂ ಸುಳ್ಳಲ್ಲ..ಜನವರಿ 22ರಂದು ಇದೇ ಯೋಗಿರಾಜ್ ಕೆತ್ತನೆ ಮಾಡಿರುವ ಶಿಲ್ಪಕ್ಕೆ ಪ್ರಾಣಪ್ರತಿಷ್ಟಾಪನೆಯಾಗಲಿದೆ.