Wednesday, January 28, 2026
24.9 C
Bengaluru
Google search engine
LIVE
ಮನೆರಾಜಕೀಯಸಹೋದರನ ಬಂಧನ ವಿಚಾರ ಸಿಎಂ ವಿರುದ್ಧ ಸಿಂಹ ಗುಡುಗು

ಸಹೋದರನ ಬಂಧನ ವಿಚಾರ ಸಿಎಂ ವಿರುದ್ಧ ಸಿಂಹ ಗುಡುಗು

ಮೈಸೂರು ; ಕೋಟ್ಯಾಂತರ ಮೌಲ್ಯದ ಮರಗಳನ್ನು ಕಡಿದ ಪ್ರಕರಣ ಸಂಭಂದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ನನ್ನನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದೀರಿ. ನಿಮ್ಮ ಕುಟುಂಬ ರಾಜಕಾರಣ ಮುಂದುವರಿಯಲಿ. ನನ್ನ ಕುಟುಂಬದವರನ್ನು ಬೀದಿಗೆ ತರುತ್ತಿದ್ದೀರಿ ಎಂದು ಸಿಎಂ ವಿರುದ್ಧ ಪ್ರತಾಪ್ ಸಿಂಹ ಹರಿಹಾಯ್ದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ ವಯಸ್ಸಾಗಿರುವ ನಮ್ಮ ತಾಯಿ, ತಂಗಿಯನ್ನೂ ಅರೆಸ್ಟ್ ಮಾಡಿ. ತಾಯಿ ಚಾಮುಂಡಿ, ಮೈಸೂರು ಮತ್ತು ಕೊಡಗು ಜನ ನನ್ನ ಕೈ ಬಿಡಲ್ಲ. ನನ್ನ ಸಹೋದರ (ವಿಕ್ರಂ ಸಿಂಹ)ನನ್ನು ಶನಿವಾರ ಮಧ್ಯಾಹ್ನ ಮೂರು ಗಂಟೆಗೆ ಅರೆಸ್ಟ್ ಮಾಡಿದ್ದೀರಿ. ಆದರೆ ಈವರೆಗೆ ಯಾಕೆ‌ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ? ನನ್ನ ಮೇಲೆ‌ ಎರಡು‌ ಕ್ರಿಮಿನಲ್‌ ಕೇಸ್ ದಾಖಲು ಮಾಡಿದ್ದೀರಿ ಎಂದರು.

ಮಾನ್ಯ ಸಿದ್ದರಾಮಯ್ಯರಿಗೆ ಸಾಷ್ಟಾಂಗ ನಮಸ್ಕಾರಗಳು. ಅವರನ್ನ ನಾನು ಶ್ಲಾಘಿಸಬೇಕು ಅಂದುಕೊಂಡಿದ್ದೇನೆ. ಮಗನ ರಾಜಕೀಯ ಭವಿಷ್ಯಕ್ಕೆ ಏನಾದರೂ ಮಾಡುತ್ತಾರೆ. ತಮ್ಮ ಮಗನನ್ನು ಎಂಪಿ ಚುನಾವಣೆಯಲ್ಲಿ ಗೆಲ್ಲಿಸಲು, ಸಿದ್ದರಾಮಯ್ಯ ಯಾರನ್ನ ಬೇಕಾದರೂ ತುಳಿಯುತ್ತಾರೆ. ತುಳಿಯುವುದನ್ನು ಸಿದ್ದರಾಮಯ್ಯ ಅವರಿಂದ ಕಲಿಯಬೇಕು ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರಂತ ತಂದೆ ಎಲ್ಲರಿಗೂ ಸಿಗಲ್ಲ. ನಿಜಕ್ಕೂ‌ ನಿಮ್ಮನ್ನ ಮೆಚ್ಚಿದ್ದೇನೆ. ನಾನು ಅಡ್ಡಿ ಆಗಿದ್ದೇನೆಂದು ನನ್ನನ್ನು ಮುಗಿಸಲು ಪ್ರಯತ್ನ ಮಾಡುತ್ತಿದ್ದೀರಿ. ನಿಮ್ಮ ಕುಟುಂಬ ರಾಜಕಾರಣವೇ ಮುಂದುವರಿಯಲಿ. ನಿಮಗೆ ಬಹಳಷ್ಟು‌ ದಾರಿಗಳಿಲ್ಲ. ತಾಯಿ ಚಾಮುಂಡಿ, ಕಾವೇರಿ ತಾಯಿ ಬಿಡುವುದಿಲ್ಲ. ಮತ್ತು ಮೈಸೂರು-ಕೊಡಗು ಕ್ಷೇತ್ರದ ಜನರು ನಿಮ್ಮನ್ನು ಬಿಡುವುದಿಲ್ಲ ಎಂದು ಕಿಡಿಕಾರಿದರು.

ನೀವು ಬ್ರಿಲಿಯೆಂಟ್ ಪಾಲಿಟಿಷಿಯನ್. ಬೆಳಗಾವಿಯಲ್ಲಿ ಹಿಂದುಳಿದ ಮಹಿಳೆಯನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದಾರೆ. ಆ ವಿಚಾರವನ್ನ ಮರೆಮಾಚಲು, ನನ್ನ ವಿಷಯ ಇಟ್ಟುಕೊಂಡು ಮೀಡಿಯಾ ಅಟೆನ್ಷನ್ ಡೈವರ್ಟ್ ಮಾಡಿದ್ರಿ. ನೀವು ನಿಮ್ಮ ಸಚಿವ ಸಂಪುಟದ ಸದಸ್ಯರು, ಡಿಸಿಎಂ‌ ಎಲ್ಲರೂ ನನ್ನ ವಿರುದ್ಧ ಮಾತಾಡುತ್ತೀರಿ. ಸಂಸತ್​ ಪಾಸ್​​ ವಿಚಾರವಾಗಿ ನನ್ನ ಹೆಸರು ಇಟ್ಟುಕೊಂಡು, ತನಿಖೆ ನಡೆಸಬೇಕೆಂದು ಹೇಳುತ್ತೀರಿ. ಇಲ್ಲಿ ನಿಮ್ಮ ಮಗ ನನ್ನ ವಿರುದ್ಧ ತನಿಖೆ‌‌ ಆಗಬೇಕು ಅಂತಾರೆ ಎಂದರು.

ಡಿಸೆಂಬರ್ 16 ರಂದು ಬೇಲೂರಿನ ಜಮೀನಿನ ವಿಚಾರವಾಗಿ ನನ್ನ ತಮ್ಮನ ಹೆಸರು ಎಳೆದು ತಂದ್ರಿ. ಮರವನ್ನು ಕಡಿದಿದ್ದಾರೆ‌ ಎಂದು ಎಫ್ಐಆರ್ ದಾಖಲಾಯ್ತು. ಜಯಮ್ಮ, ರಾಜೇಶ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ರವಿ ಎಂಬವರು ಸಹಾಯ ಮಾಡಿ, ಪರಾರಿಯಾಗಿದ್ದಾರೆ. ಈವರಗೆ ಮೂವರನ್ನು ಹಿಡಿಯಲು ಆಗಿಲ್ಲ. ಎಲ್ಲಾ ಮರಗಳನ್ನ ಹಾಸನದ ಅರಣ್ಯ ಭವನದಲ್ಲಿ ಇರಿಸಿದ್ದೀರಿ. 24ನೇ ತಾರೀಖಿನವರಗೆ ನೀವು ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments