
ಮೈಸೂರು : ಸಂಸದ ಪ್ರತಾಪ್ ಸಿಂಹ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಾಧ ಸಂಖ್ಯೆ 0119/2023ಯಡಿ ದೂರು ರಿಜಿಸ್ಟರ್ ಆಗಿದೆ. ಇಷ್ಟಕ್ಕೂ ಎಫ್ ಐ ಆರ್ ನಲ್ಲಿ ಏನೇನಿದೆ ಅನ್ನೋದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

ಹುಣಸೂರಿನಲ್ಲಿ ನಡೆದ ಹನುಮಜಯಂತಿ ಕಾರ್ಯಕ್ರಮದ ಬಳಿಕ ಭಾಷಣ ಮಾಡುವಾಗ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಏಕವಚನದಲ್ಲಿ ಮಾತಾಡಿಸಿದ್ರು ಅನ್ನೋ ಆರೋಪ ಎದುರಾಗಿತ್ತು. ಈ ಕುರಿತಂತೆ ಸಿಟ್ಟಿಗೆದ್ದ ಕಾಂಗ್ರೆಸ್ ಬೆಂಬಲಿಗರು ದಿಢೀರ್ ಪ್ರತಿಭಟನೆ ನಡೆಸಿದ್ರು.
ಸಂಸದರ ಕಛೇರಿ ಮುಂದೆ ಮೈಸೂರು ಗ್ರಾಮಾಂತರ ಅಧ್ಯಕ್ಷ ವಿಜಯ್ ಕುಮಾರ್ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯ್ತು. ಅಲ್ಲದೇ ಸಂಸದರ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಕಾಂಗ್ರೆಸ್ ಪಟ್ಟು ಹಿಡಿದಿತ್ತು. ರಸ್ತೆಗಳಲ್ಲಿ ಟೈರ್ಗೆ ಬೆಂಕಿ ಹಚ್ಚಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ರು. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಹಿರಿಯ ಅಧಿಕಾರಿಗಳು ಎಫ್ ಐ ಆರ್ ದಾಖಲಿಸುವುದಾಗಿ ಭರವಸೆ ಕೊಟ್ಟ ಬಳಿಕವಷ್ಟೆ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದ್ರು.

ಇನ್ನು ಪ್ರತಾಪ್ ಸಿಂಹ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಸಿದ್ದ ಎಂದು ಏಕವಚನ ಬಳಸಿದ್ರು. ಅಲ್ಲದೇ ಸಿದ್ದರಾಮಯ್ಯ ಜಾತಿ ಜಾತಿಗಳ ನಡುವೆ ದ್ವೇಷ ಹರಡುತ್ತಿದ್ದಾರೆಂದು ಆರೋಪ ಮಾಡಿದ್ರು. ಈ ಹಿನ್ನೆಲೆಯಲ್ಲಿ ಮೈಸೂರು ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿಜಿ ವಿಜಯ್ ಕುಮಾರ್ ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ರು ಅದರಂತೆ ಇದೀಗ ಎಫ್ ಐ ಆರ್ ದಾಖಲಾಗಿದೆ. ಐಪಿಸಿ 504 ಹಾಗೂ 153ರಡಿ ಪ್ರಕರಣ ದಾಖಲಾಗಿದೆ.

ಇಷ್ಟಕ್ಕೂ ದೂರಿನಲ್ಲಿರೋ ಅಂಶಗಳಾದ್ರೂ ಏನು ಅಂತ ನೋಡೋದಾದ್ರೆ, ದಿನಾಂಕ 26/12/23ರಂದು ಠಾಣೆಗೆ ಹಾಜರಾದ ಪಿರ್ಯಾದುದಾರರಾದ ಡಾ.ಬಿಜೆ ವಿಜಯ್ ಕುಮಾರ್ ಅದೇ ದಿನ ಮೈಸೂರು ಜಿಲ್ಲೆಯ ಹುಣಸೂರು ಟೌನ್ ನಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೈಸೂರು ಕೊಡಗು ಲೋಕಸಭೆ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳ ಮುಂದೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರನ್ನು ಸೋಮಾರಿ ಸಿದ್ದ ಎಂದು ಏಕವಚನದಲ್ಲಿ ಮಾತನಾಡಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಜಾತಿ ಜಾತಿಗಳ ನಡುವೆ ದ್ವೇಷ ಹರಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಹಿಂದೂ ಮುಸ್ಲಿಂ ನಡುವೆ ನಡುವೆ ಕೋಮುಗಲಭೆ ಸೃಷ್ಟಿಸಲು ನಿರಂತ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಅಶಾಂತಿ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ ಹೀಗಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರು ನೀಡಲಾಗಿದೆ.
ಸಧ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ರು ಪ್ರತಾಪ್ ಸಿಂಹ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಐಪಿಸಿ 504 ಶಾಂತಿ ಭಂಗ ಹಾಗೂ ಐಪಿಸಿ 153 ಗಲಭೆ ಉಂಟು ಮಾಡುವ ಉದ್ದೇಶದಡಿ ಕೇಸ್ ರಿಜಿಸ್ಟರ್ ಆಗಿದೆ. ಈ ಎರಡು ಪ್ರಕರಣಗಳು ಕಾನೂನು ಬಾಹಿರ ಕೃತ್ಯ ಎಂದು ಪರಿಗಣಿಸಿ ಮುಂದಿನ ತನಿಖೆ ನಡೆಸಲಾಗುತ್ತದೆ.




