ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ವಕೀಲರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಜುಲೈ 19ರಂದೇ ಮೈಸೂರಿನ ವಕೀಲ ವಿ.ರವಿಕುಮಾರ್ ಎಂಬುವರು ಮುಡಾ ಹಗರಣ ಸಂಬಂಧ ಪ್ರಧಾನಿ ಮೋದಿ ಅವರಿಗೆ 296 ಪುಟಗಳ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ. ಅಲ್ಲದೆ, ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.
ಮುಡಾ ಮಾಜಿ ಆಯುಕ್ತರಾದ ಜಿ.ಟಿ.ದಿನೇಶ್ ಕುಮಾರ್, ನಟೇಶ್ ಇಬ್ಬರು 100 ಕೋಟಿ ರೂಪಾಯಿಗೂ ಅಧಿಕ ಆರ್ಥಿಕ ನಷ್ಟ ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸೇಲ್ ಡೀಡ್, ಸೆಟಲ್ ಮೆಂಟ್ ಡೀಡ್ ಹೆಸರಿನಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ. ದಿನೇಶ್ ಕುಮಾರ್ ಮತ್ತು ನಟೇಶ್ ಇಬ್ಬರೂ ಬೇನಾಮಿ ವಹಿವಾಟು ನಡೆಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮೋದಿಗೆ ಬರೆದ ದೂರಿನ ಪತ್ರದಲ್ಲಿ ಏನಿದೆ..?
‘ಪ್ರತಿಷ್ಠಿತ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುವ ಉದ್ದೇಶದಿಂದ ನಾನು ಈ ಪತ್ರವನ್ನು ಅತ್ಯಂತ ಜವಾಬ್ದಾರಿಯಿಂದ ಬರೆದಿದ್ದು, ಸಹಿ ಹಾಕಿದ್ದೇನೆ. ನಾನು ಮೈಸೂರು ನಗರದ ವಕೀಲ ಮತ್ತು ಖಾಯಂ ನಿವಾಸಿಯಾಗಿದ್ದೇನೆ. ಕಳೆದ ಕೆಲ ವರ್ಷಗಳಿಂದ ಮೈಸೂರು ಮಹಾರಾಜರಿಂದ ಮುಡಾ ರಚನೆಯಾದ ಕಾರಣವನ್ನೇ ಮರೆತು ದಲ್ಲಾಳಿಗಳಿಗೆ, ಎಸ್ಟೇಟ್ ಏಜೆಂಟರು ಇತ್ಯಾದಿಗಳಿಗೆ ಅನುಕೂಲ ಮಾಡಿಕೊಡುವ ಅಧಿಕಾರವಾಗಿ ಮಾರ್ಪಟ್ಟಿದೆ ಎಂದು ಹೇಳುವುದು ದುರಂತದ ಸಂಗತಿ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಅರ್ಜಿದಾರರಿಗೆ ನಿವೇಶನಗಳನ್ನು ಅಭಿವೃದ್ಧಿ ಪಡಿಸಿಲ್ಲ ಮತ್ತು ವಿತರಿಸಿಲ್ಲ.’

ಪ್ರಭಾವಿಗಳ ಬ್ಲ್ಯಾಕ್ & ವೈಟ್ ದಂಧೆ..!
2020ರಿಂದಲೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50 ಅನುಪಾತದ ಆಧಾರದಡಿ ಪರಿಹಾರಾತ್ಮಕ ಬದಲಿ ನಿವೇಶನಗಳ ಹಂಚಿಕೆಯಲ್ಲಿ ಕೋಟ್ಯಂತರ ರೂಪಾಯಿಗಳ ಕಪ್ಪುಹಣದ ವಹಿವಾಟು ನಡೆದಿದೆ. ಸುಮಾರು 5 ಸಾವಿರ ಅಕ್ರಮ ನಿವೇಶನಗಳನ್ನು ಭೂಗಳ್ಳರಿಗೆ ಹಂಚಲಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 4 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಮುಡಾ ಹಗರಣದ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ. ಮೈಸೂರು ನಗರದ ಪ್ರಮುಖ ಬಡಾವಣೆಗಳಲ್ಲಿ ಸರ್ಕಾರಿ ಹಂಚಿಕೆ ನಿಯಮಗಳನ್ನು ಉಲ್ಲಂಘಿಸಿ ಮತ್ತು ನಿಗದಿತ ಮಾರ್ಗಸೂಚಿ ಮೌಲ್ಯವನ್ನು ಸಂಗ್ರಹಿಸದೆ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ವಕೀಲ ರವಿಕುಮಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮುಡಾ ಅಕ್ರಮ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಪಟ್ಟಂತೆ 10 ಪುಟಗಳ ದೂರಿನ ಜತೆಗೆ 296 ಪುಟಗಳ ದಾಖಲೆಯನ್ನೂ ಮೈಸೂರಿನ ವಕೀಲ ವಿ.ರವಿಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ.


