ಬೆಂಗಳೂರು: ಮದುವೆ ಆಗು ಎಂದಿದ್ದಕ್ಕೆ ವಿಚ್ಛೇದಿತ ಮಹಿಳೆಗೆ ಚಾಕುವಿನಿಂದ ಇರಿದು ಪ್ರಿಯಕರ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಜಿ. ಹಳ್ಳಿಯಲ್ಲಿ ನಡೆದಿದೆ.. ರೇಣುಕಾ ಮೃತ ಮಹಿಳೆಯಾಗಿದ್ದು, ಅ. 31ರ ರಾತ್ರಿ 9.30 ಕ್ಕೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿ ಅಂಬೇಡ್ಕರ್ ಅಲಿಯಾಸ್ ಕುಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಬಳಿಕ ಮೃತ ರೇಣುಕಾ ಕುಟ್ಟಿಯನ್ನು ಮದುವೆಯಾಗು ಎಂದು ದುಂಬಾಲು ಬಿದ್ದಿದ್ದಳು. ನೀನು ಟೈಮ್ ಪಾಸ್‌ಗಾಗಿ ಪ್ರೀತಿ ಮಾಡುವುದೆಲ್ಲ ಬೇಡ, ಮದುವೆಯಾಗು ಎನ್ನುತ್ತಿದ್ದಳಂತೆ. ಇದರಿಂದ ಕುಟ್ಟಿ ರೊಚ್ಚಿಗೆದ್ದಿದ್ದ. ಘಟನೆಯಾದ ದಿನ ರೇಣುಕಾ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಳು. ಈ ವೇಳೆ ಕುಟ್ಟಿ ರೇಣುಕಾಳನ್ನು ತಡೆದು, ನಿನ್ನ ಜೊತೆ ಮಾತಾಡಬೇಕು ಬಾ ಎಂದು ಪಿಳ್ಳಣ್ಣ ಗಾರ್ಡನ್‌ನ ಸರ್ಕಾರಿ ಶಾಲೆಯ ಬಳಿ ಕರೆದುಕೊಂಡು ಹೋಗಿದ್ದ. ಅಲ್ಲಿ 6 ಬಾರಿ ಚಾಕುವಿನಿಂದ ಇರಿದು ಸಾರ್ವಜನಿಕವಾಗಿ ಹತ್ಯೆ ಮಾಡಿ, ಪರಾರಿಯಾಗಿದ್ದಾನೆ.
ರೇಣುಕಾಗೆ ಈಗಾಗಲೇ ಮದುವೆಯಾಗಿದ್ದು, ಪತಿಯಿಂದ ದೂರವಾಗಿದ್ದಳು. ಒಂದು ಮಗುವಿನೊಂದಿಗೆ ಬದುಕು ಕಟ್ಟಿಕೊಂಡಿದ್ದ ರೇಣುಕಾಗೆ ಅದೇ ಏರಿಯಾದಲ್ಲಿ ಬ್ಯಾನರ್ ಪ್ರಿಂಟಿಂಗ್ ಮಾಡುವ ಕೆಲಸ ಮಾಡಿಕೊಂಡಿದ್ದ ಕುಟ್ಟಿ ಎಂಬಾತನ ಪರಿಚಯವಾಗಿತ್ತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿದ್ದು, ಮದುವೆಯಾಗುವಂತೆ ಕುಟ್ಟಿಯನ್ನ ರೇಣುಕಾ ಒತ್ತಾಯಿಸಿದ್ದಳು. ಈ ರೀತಿಯ ಟೈಮ್ಪಾಸ್ ಪ್ರೀತಿ ಬೇಡ ಎಂದಿದ್ದಳು. ಹೀಗಾಗಿ ನಿನ್ನ ಬಳಿ ಮಾತನಾಡಬೇಕು ಬಾ ಎಂದು ರೇಣುಕಾಳನ್ನ ಕರೆದಿದ್ದ ಆರೋಪಿ, ಪಿಳ್ಳಣ್ಣ ಗಾರ್ಡನ್ ಬಿಬಿಎಂಪಿ ಶಾಲೆ ಬಳಿ ಆಕೆಗೆ ಎಂಟು ಬಾರಿ ಚಾಕುವಿನಿಂದ ಇರಿದಿದ್ದ. ಕೂಡಲೇ ರೇಣುಕಾಳನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು, ಆರೋಪಿ ಕುಟ್ಟಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


