#Exclusive NewsTop Newsರಾಜಕೀಯರಾಜ್ಯಸುದ್ದಿಹಣಕಾಸು

ಚೊಂಬು ವರ್ಸಸ್‌ ಚೊಂಬು; ಕಾಂಗ್ರೆಸ್‌ಗೆ ತಿರುಗೇಟು ನೀಡಲು ಬಿಜೆಪಿ ಹೊಸ ಪ್ಲಾನ್‌!

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸರಿಯಾದ ಅನುದಾನ ಸಿಕ್ಕಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಕೈಯಲ್ಲಿ ಚೊಂಬು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದು ಇಡೀ ದೇಶದ ಗಮನ ಸೆಳೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ‘ಚೊಂಬು ಜಾಹೀರಾತು’ ದೊಡ್ಡ ಮಟ್ಟದ ಚರ್ಚೆ ಮತ್ತು ಪರ-ವಿರೋಧದ ಅಲೆ ಎಬ್ಬಿಸಿತ್ತು. ರಾಜ್ಯಕ್ಕೆ ಕೇಂದ್ರ ಸರ್ಕಾರ ಕೇವಲ ಖಾಲಿ ಚೊಂಬು ನೀಡಿದೆ ಎಂದು ಲೇವಡಿ ಮಾಡಿದ್ದ ಕಾಂಗ್ರೆಸ್‌ಗೆ ಈಗ ಬಿಜೆಪಿ ಅದೇ ಶೈಲಿಯಲ್ಲಿ ತಿರುಗೇಟು ನೀಡಲು ಮುಂದಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ರಾಜ್ಯ ಬಜೆಟ್ ಅನ್ನು ಖಂಡಿಸಿ ಬಿಜೆಪಿ ನಾಯಕರು ವಿಧಾನಸೌಧದ ಪೂರ್ವ ದ್ವಾರದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸರ್ಕಾರದ ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ಧಿಗೆ ಯಾವುದೇ ಹೊಸ ಯೋಜನೆಗಳಿಲ್ಲ ಮತ್ತು ಜನಸಾಮಾನ್ಯರಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಆರೋಪಿಸಿದ ಬಿಜೆಪಿ ನಾಯಕರು, ಕೈಯಲ್ಲಿ ಚೊಂಬು ಹಿಡಿದು ಹಾಗೂ ಕಿವಿಯಲ್ಲಿ ಹೂವಿಟ್ಟುಕೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜ್ಯದ ಬಜೆಟ್ ಕೇವಲ ಖಾಲಿ ಚೊಂಬಿನಂತಿದೆ ಮತ್ತು ಜನರಿಗೆ ಸರ್ಕಾರ ಕಿವಿಯಲ್ಲಿ ಹೂವಿಡುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಕಿಡಿಕಾರಿದರು.

ಈ ವಿಭಿನ್ನ ಪ್ರತಿಭಟನೆಯು ವಿಧಾನಸೌಧದ ಆವರಣದಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ಸಂಘರ್ಷಕ್ಕೆ ಹೊಸ ರೂಪ ನೀಡಿದೆ. ಕಾಂಗ್ರೆಸ್ ಹೂಡಿದ ‘ಚೊಂಬು’ ಅಸ್ತ್ರವನ್ನೇ ಬಳಸಿ ಬಿಜೆಪಿಯು ಈಗ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟುಮಾಡಲು ಪ್ರಯತ್ನಿಸುತ್ತಿದೆ. ಒಟ್ಟಿನಲ್ಲಿ ಈ ‘ಚೊಂಬು ಮತ್ತು ಹೂವು’ ರಾಜಕಾರಣ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಬಜೆಟ್ ವಿಚಾರಕ್ಕಿಂತ ಹೆಚ್ಚಾಗಿ ಈ ಪ್ರತಿಭಟನೆಗಳೇ ಈಗ ಜನರ ಚರ್ಚೆಯ ಕೇಂದ್ರಬಿಂದುವಾಗಿವೆ.

Comments (0)

Your email address will not be published. Required fields are marked *

Back to top button