ಮೈಸೂರು: ಮುಡಾದಲ್ಲಿ 50:50 ಸೈಟು ಹಂಚಿಕೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಸಿಎಂ ಬಳಿಕ ಮತ್ತೊಬ್ಬ ರಾಜಕಾರಣಿ ವಿರುದ್ಧ ದೂರು ನೀಡಿದ್ದಾರೆ.

ಹೌದು. 50:50 ನಿವೇಶನ ಪಡೆಯುವಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿದ್ದು, ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಪೊಲೀಸರಿಗೆ ದಾಖಲೆ ಸಮೇತ ದೂರು ನೀಡಿದ್ದಾರೆ.

ಕೋರ್ಟ್‌ನಲ್ಲಿ ವ್ಯಾಜ್ಯ ಇದ್ದ ಭೂಮಿಗೆ ಅಕ್ರಮವಾಗಿ 50:50 ಪರಿಹಾರ ಕೊಡಿಸಲಾಗಿದೆ. ಜಿ.ಟಿ ದೇವೇಗೌಡರ ಪ್ರಭಾವ ಬಳಸಿ ಚೌಡಯ್ಯ ಎಂಬವರ ಹೆಸರಿಗೆ 44,736 ಚದರ ಅಡಿ ಜಾಗದ 6 ನಿವೇಶನ ಕೊಡಿಸಿದ್ದಾರೆ. ಅದರಲ್ಲಿ ಕಿಕ್‌ಬ್ಯಾಕ್‌ ರೂಪದಲ್ಲಿ 2 ನಿವೇಶನ ತಮ್ಮ ಕುಟುಂಬಕ್ಕೆ ಬರೆಸಿಕೊಂಡಿದ್ದಾರೆ. ವಿಜಯನಗರ ಬಡಾವಣೆ 4ನೇ ಹಂತದಲ್ಲಿ 2 ನಿವೇಶನ ಪಡೆದು ಅದನ್ನ ತಮ್ಮ ಮಗಳು ಅನ್ನಪೂರ್ಣ ಹಾಗೂ ಅಳಿಯ ವಿಶ್ವೇಶ್ವರಯ್ಯ ಹೆಸರಿಗೆ ಕ್ರಯ ಮಾಡಿಸಿದ್ದಾರೆ.

ಇದರಲ್ಲಿ ಜಿ.ಟಿ ದೇವೇಗೌಡ ಅವರ ಪ್ರಭಾವ ಇರುವುದು ದಟ್ಟವಾಗಿದೆ. ಆರ್‌ಟಿಸಿಯಲ್ಲಿ ಸರ್ಕಾರಿ ಭೂಮಿ ಎಂದು ಇದೆ. ಈ ವ್ಯಾಜ್ಯ ಕೋರ್ಟ್‌ನಲ್ಲಿ ಬಾಕಿ ಇದೆ. ಆದಾಗ್ಯೂ ಜಿಟಿಡಿ ತಮ್ಮ ಕುಟುಂಬಕ್ಕೆ 50:50 ನಿವೇಶನ ಬರೆಸಿಕೊಂಡಿರುವ ಅನುಮಾನವಿದೆ. ಮುಡಾ ವ್ಯಾಪ್ತಿಗೆ ಭೂಮಿ ಬರದಿದ್ದರೂ, ದೇವನೂರು ಬಡಾವಣೆಗೆ ಪರಿಹಾರ ಕೊಟ್ಟಂತೆ ಮಾಡಲಾಗಿದೆ. ಇದೆಲ್ಲದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸುವಂತೆ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ.

By Veeresh

Leave a Reply

Your email address will not be published. Required fields are marked *

Verified by MonsterInsights