ಲೆಫ್ಟಿನೆಂಟ್ ರಾಮ್‌ಗಾಗಿ ಹೈದರಾಬಾದ್ ಸಂಸ್ಥಾನ, ರಾಜಸತ್ತೆಯನ್ನೇ ತೊರೆದು ಕಾಶ್ಮೀರಕ್ಕೆ ತೆರಳಿದ ಸೀತಾಮಹಾಲಕ್ಷ್ಮಿ.. ರಾಮ್ ಅಗಲಿದ 20 ವರ್ಷಗಳ ನಂತರವೂ ಸೀತೆಯಾಗಿಯೇ ಉಳಿಯುತ್ತಾರೆ. ಸೀತಾರಾಮಂ ನೋಡಿದವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತಾರೆ.
ಈ ಪಾತ್ರದ ನಂತರ ಮೃಣಾಲ್ ಠಾಕೂರ್ ವೃತ್ತಿಜೀವನದ ಗ್ರಾಫ್ ಏರಿಕೆಯಾಗಿದೆ. ಹಾಯ್ ನಾನ್ನಾ, ದಿ ಫ್ಯಾಮಿಲಿ ಸ್ಟಾರ್, ಗುಮ್ರಾ, ಪಿಪ್ಪಾ ಲಸ್ಟ್ ಸ್ಟೋರೀಸ್-2 ವೆಬ್ ಸೀರೀಸ್ನಲ್ಲಿ ಮೃಣಾಲ್ ನಟಿಸಿ ಇನ್ನಷ್ಟು ಜನಪ್ರಿಯರಾಗಿದ್ದಾರೆ. ಕೈಯಲ್ಲಿ ವಿಶ್ವಂಭರ ಸೇರಿ ಹಲವು ಚಿತ್ರಗಳಿವೆ.. ಸೋಷಿಯಲ್ ಮೀಡಿಯಾದಲ್ಲಂತೂ ಮೃಣಾಲ್ ಈಗ ಸಿಕ್ಕಾಪಟ್ಟೆ ಪಾಪುಲರ್.
ಆದರೆ, ರಾಮಾಯಣದ ಸೀತೆಯ ಪಾತ್ರದಷ್ಟೇ ಒಂದು ಕಾಲದಲ್ಲಿ ನೋವುಂಡವರು ಮೃಣಾಲ್.. ಒಂದು ಹಂತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸು ಮಾಡಿದ್ದರು. ಆ ದಿನಗಳಿಂದ ಸೀತಾರಾಮಂ ಗೆಲುವು ದಕ್ಕಿಸಿಕೊಳ್ಳುವ ದಿನದವರೆಗೂ ಸೀತೆ ಪಟ್ಟ ಕಷ್ಟಗಳು ಎಷ್ಟೆಷ್ಟೋ? ಆ ಕಷ್ಟಗಳಿಂದ ಮೃಣಾಲ್ ಠಾಕೂರ್ ಸಾಕಷ್ಟು ಪಾಠಗಳನ್ನೇ ಕಲಿತಿದ್ದಾರೆ.
ಹೆಜ್ಜೆ ಹೆಜ್ಜೆಗೂ ಅಪಮಾನ
ಆರಂಭದಲ್ಲಿ ಮಾಡೆಲ್ ಆಗಿ ಕಿರುತೆರೆಯಲ್ಲಿ ಕಾಣಿಸಿಕೊಂಡವರು ಮೃಣಾಲ್.. ಸಿನಿಮಾ ಲೋಕಕ್ಕೆ ಎಂಟ್ರಿ ಕೊಡೋಣ ಅಂದರೇ ಅಡಿಗಡಿಗೂ ಅಡ್ಡಿ-ಅಪಮಾನಗಳೇ ಎದುರಾಗಿದ್ದವು.
ನೀನ್ಯಾಕೆ ಬಂದೇ.. ಅಸಲಿಗೆ ನೀನು ಹೀರೋಯಿನ್ ಪ್ರಾಡಕ್ಟೇ ಅಲ್ಲ.. ನಾವು ಫ್ರೆಶ್ ಫೇಸ್ ಬಯಸುತ್ತಿದ್ದೇವೆ.. ಸೀರಿಯಲ್‌ನಲ್ಲಿ ನಟಿಸೋರು ಸಿನಿಮಾಗೆ ಲಾಯಕ್ಕಲ್ಲ.. ಮೊದಲು ನೀವಿಲ್ಲಿಂದ ಹೊರಡಿ ಎಂದು ಆಡಿಷನ್‌ಗೆ ಹೋದ ಸಂದರ್ಭದಲ್ಲಿ ಅವಮಾನಿಸಿದವರು ಎಷ್ಟೋ ಮಂದಿ ಇದ್ದಾರೆ.
ಎಷ್ಟೋ ಅವಮಾನ.. ಎಷ್ಟೋ ಸವಾಲುಗಳನ್ನು ಎದುರಿಸಿ ಮೃಣಾಲ್ ಈ ಮಟ್ಟಕ್ಕೆ ಬೆಳೆದಿದ್ದಾರೆ. ಅದನ್ನು ಮೃಣಾಲ್ ಎಂದಿಗೂ ಮರೆಯುವುದಿಲ್ಲ.
ಪಿಯು ಮುಗಿಸುವ ಹೊತ್ತಿಗೆ 11 ಸ್ಕೂಲ್ ಬದಲಿಸಿದ್ದರು ಮೃಣಾಲ್
ಮೃಣಾಲ್ ಹುಟ್ಟಿ ಬೆಳೆದಿದ್ದು ಮಹಾರಾಷ್ಟ್ರದ ಧುಲೆ ಎಂಬಲ್ಲಿ.. ಅಪ್ಪ ಬ್ಯಾಂಕ್ ಉದ್ಯೋಗಿ ಆದ ಕಾರಣ ಯಾವಾಗಲೂ ಊರಿಂದೂರಿಗೆ ಟ್ರಾನ್ಸ್‌ಫರ್ ಆಗುತ್ತಿದ್ದರು. ಪರಿಣಾಮ ಮೃಣಾಲ್ ಪಿಯುಸಿ ಮುಗಿಸುವ ಹೊತ್ತಿಗೆ 11 ಸ್ಕೂಲ್ ಬದಲಾಯಿಸಿದ್ದರು. ಅದಕ್ಕೆ ಮೃಣಾಲ್ ಠಾಕೂರ್‌ಗೆ ಸ್ಕೂಲ್ ಫ್ರೆಂಡ್ಸ್ ಕಡಿಮೆ. ಎಂಟನೇ ತರಗತಿ ಹೊತ್ತಿಗೆ ಮುಂಬೈ ಸೇರಿದ ಮೃಣಾಲ್‌ಗೆ ಶಾಲೆಯಲ್ಲಿ ನಿಂಗೆ ಇಂಗ್ಲೀಷ್ ಬರಲ್ಲ ಎಂದು ಸಾಕಷ್ಟು ಮಂದಿ ಆಡಿಕೊಂಡಿದ್ರು. ಆದ್ರೆ, ಸಾಕಷ್ಟು ಕಷ್ಟಪಟ್ಟು ಮೂರೇ ತಿಂಗಳಿಗೆ ನಿರರ್ಗಳವಾಗಿ ಇಂಗ್ಲೀಷ್‌ನಲ್ಲಿ ಮಾತಾಡುವುದರಲ್ಲಿ ಎಕ್ಸ್‌ಪರ್ಟ್ ಆಗಿ,ಎಲ್ಲರಿಂದ ಸೈ ಎನಿಸಿಕೊಂಡರು.
ಸೂಸೈಡ್ಗೆ ಮನಸ್ಸು ಮಾಡಿದ್ದರು ಮೃಣಾಲ್
ಮೊದಲು ಬಿಡಿಎಸ್ ಮಾಡಬೇಕೆಂದು ಮೃಣಾಲ್ ಬಯಸಿದ್ದರು.ಆದ್ರೆ, ಕೊನೆಗೆ ಮನಸ್ಸು ಬದಲಿಸಿ ಜರ್ನಲಿಸಂ ಮಾಡಿದ್ರು. ಕೊನೆಗೆ ಅದು ನನಗೆ ಸೂಟ್ ಆಗಲ್ಲ ಎಂಬುದನ್ನು ಅರ್ಥ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಅಪ್ಪನಿಗೆ ಮತ್ತೆ ಟ್ರಾನ್ಸ್‌ಫರ್ ಆಯಿತು. ಮುಂಬೈನಲ್ಲಿ ಏಕಾಂಗಿಯಾಗಿ ಉಳಿದುಕೊಂಡರು. ಇದೇ ಹೊತ್ತಲ್ಲಿ ಖಿನ್ನತೆ ಆವರಿಸಿತ್ತು. ಲೋಕಲ್ ರೈಲುಗಳಲ್ಲಿಸಂಚರಿಸುವಾಗ ರೈಲಿಂದ ಬೀಳಬೇಕೆಂದು ಮೃಣಾಲ್ ಆಲೋಚನೆ ಮಾಡುತ್ತಿದ್ದರು. ಆದರೆ ಮರುಕ್ಷಣವೇ ಅಪ್ಪ ಅಮ್ಮನ ನೆನಪಾಗಿ ಸುಮ್ಮನಾಗುತ್ತಿದ್ದರು. ಕೊನೆಗೆ ಓದುತ್ತಲೇ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟರು.
ಸಲ್ಲು ಜೊತೆ ನಟಿಸುವ ಚಾನ್ಸ್ ಕೈತಪ್ಪಿದಾಗ
2012ರಲ್ಲಿ ಮುಝೆ ಕುಚ್ ಕೆಹತಿ ಹೈ ಕಾಮೋಷಿಯಾ ಎಂಬ ಸೀರಿಯಲ್‌ನಲ್ಲಿ ಅವಕಾಶ ಸಿಕ್ಕಿತ್ತು. ನಂತರ ಕುಂಕುಮ್ ಭಾಗ್ಯ ತುಂಬಾ ಒಳ್ಳೆ ಹೆಸರು ತಂದುಕೊಟ್ಟಿತು. ಒಂದು ಕಡೆ ಸೀರಿಯಲ್‌ನಲ್ಲಿ ನಟಿಸುತ್ತಾ ಸಿನಿಮಾಗಳಲ್ಲಿ ಚಾನ್ಸ್‌ಗೆ ಪ್ರಯತ್ನಿಸುತ್ತಿರು. ಆದ್ರೆ ಎಲ್ಲಾ ಕಡೆ ಅಪಮಾನವೇ ಎದುರಾಗುತ್ತಿತ್ತು.
ಕೊನೆಗೆ ಸುಲ್ತಾನ್‌ನಲ್ಲಿ ಸಲ್ಲು ಜೊತೆ ನಾಯಕಿಯಾಗಿ ನಟಿಸುವ ಚಾನ್ಸ್ ಸಿಕ್ಕಿತ್ತು. ಮೂರು ತಿಂಗಳು ಮಾರ್ಷಲ್ ಆರ್ಟ್ ಕೂಡ ಕಲಿಯಲು ನಿರ್ಮಾಪಕರು ಕಳಿಸಿದ್ದರು. ಅದರೆ, ಅದೇನಾಯ್ತೋ ಏನೊ.. ಮೃಣಾಲ್ ಸ್ಥಾನದಲ್ಲಿ ಅನುಷ್ಕಾ ಶರ್ಮಾಗೆ ಚಾನ್ಸ್ ಸಿಕ್ಕಿತ್ತು. ಆದರೆ, ಮೃಣಾಲ್ ಠಾಕೂರ್ ಕುಗ್ಗಲಿಲ್ಲ. ಲವ್ ಸೋನಿಯಾ ಸಿನಿಮಾದಲ್ಲಿ ಲೀಡ್ ರೋಲ್ ಸಿಕ್ಕಿತು. ಸಿನಿಮಾ ಹಿಟ್ ಆಗಿ ಒಳ್ಳೆ ಹೆಸರು ತಂದುಕೊಟ್ಟಿತು. ನಂತರ ಸೂಪರ್30, ಬಾಟ್ಲಾ ಹೌಸ್, ತೂಫಾನ್, ಧಮಾಕಾ, ಜೆರ್ಸಿ ಸಿನಿಮಾಗಳಲ್ಲಿ ಮೃಣಾಲ್ ನಟಿಸಿದರು. ಓಟಿಟಿಗಳ ವೆಬ್ ಸೀರೀಸ್‌ಗಳಲ್ಲಿ ಬಣಹಚ್ಚಿದರು.
ಕಾಫಿ ಶಾಪ್ನಲ್ಲಿ ಸೀತಾರಾಮಂ ಆಫರ್
ಸೀತಾರಾಮಂ ಮೃಣಾಲ್ ಸಿನಿ ಜೀವನದ ಮೈಲಿಗಲ್ಲು. ಹಿಂದಿ ಸಿನಿಮಾ ಜೆರ್ಸಿ ಶೂಟಿಂಗ್ ವೇಳೆ ಸೀತಾರಾಮಂ ನಿರ್ದೇಶಕ ಹನು ರಾಘವಪೂಡಿ ಫೋನ್ ಮಾಡಿ ಕತೆ ಹೇಳಬೇಕು ಎಂದರು. ಮುಂಬೈ ಕಾಫಿಶಾಪ್ ನಲ್ಲಿ ಮೀಟ್ ಮಾಡಿದರು. ಅವರು ಕತೆ ಹೇಳುವ ರೀತಿ ಮೃಣಾಲ್‌ಗೆ ಹಿಡಿಸಿತು. ಸೀತಾ ಪಾತ್ರ ಇನ್ನಷ್ಟು ಇಷ್ಟವಾಯಿತು. ಸಿನಿಮಾದಲ್ಲಿ ನಟಿಸಿದ ಮೃಣಾಲ್ ಠಾಕೂರ್ ಈಗ ಸೀತಾ ಎಂದೇ ಹೆಸರುವಾಸಿ..
ಕನಸುಗಳಿಲ್ಲದ ಜೀವನ ವ್ಯರ್ಥ.. ಆ ಸ್ವಪ್ನಗಳ ಹಿಂದೆ ನಿತ್ಯ ರನ್ ಮಾಡಿ.. ಯಶಸ್ಸನ್ನು ಕಾಣುತ್ತೀರಾ ಎಂದು ಮೃಣಾಲ್ ಠಾಕೂರ್ ಹೇಳುತ್ತಾರೆ.. ಏನಂತೀರಿ..