ಹುಬ್ಬಳ್ಳಿ : ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಹಣ ಹಂಚುವುದರಲ್ಲಿ ಕಾಂಗ್ರೆಸ್ ನಾಯಕರ ನಡುವೆ ಪೈಪೋಟಿ ಶುರುವಾಗಿದೆ‌. ಸಮುದಾಯವಾರು ಶಾಸಕರು ಹಣ ಹಂಚಿಕೆ ಮಾಡುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಹಂಚುವುದನ್ನು ನೋಡಿರಲಿಲ್ಲ‌ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಉಪ ಚುನಾವಣೆ ಕಾಂಗ್ರೆಸ್​ ವರ್ಸಸ್ ಬಸವರಾಜ ಬೊಮ್ಮಾಯಿ ಎಂದ ಅವರು, ಸರ್ಕಾರದಿಂದ ಲೂಟಿ ಮಾಡಿದ ಹಣವನ್ನು ಇಲ್ಲಿ ಹಂಚುತ್ತಿದ್ದಾರೆ ಎಂದು ಆರೋಪಿಸಿದರು.

ಹಾನಗಲ್ ರೈತ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ರೈತನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಅದನ್ನು ತೆಗೆಸಲು ಆ ರೈತ ನಾಲ್ಕೈದು ವರ್ಷ ಅಲೆದಾಡಿದ್ದಾರೆ‌. ವಕ್ಫ್​ಗೆ ಹೋದರೂ ಅಲ್ಲಿ ನ್ಯಾಯ ಸಿಗುವುದಿಲ್ಲ‌ ಅಂತ ಗೊತ್ತಾಗಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಅವರ ಕುಟುಂಬದವರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬರೆದುಕೊಟ್ಟಿದ್ದಾರೆ ಎಂದು ಹೇಳಿದರು.

ರೈತರಿಗೆ ನೋಟಿಸ್ ಕೊಟ್ಟಿರುವುದನ್ನು ವಾಪಸ್ ಪಡೆಯುವುದು ಕಣ್ಣೊರೆಸುವ ತಂತ್ರ. ಎಲ್ಲಿಯವರೆಗೆ ಗೆಜೆಟ್ ನೋಟಿಫಿಕೇಶನ್ ವಾಪಸ್ ಪಡೆಯುವುದಿಲ್ಲವೋ ಅಲ್ಲಿಯವರೆಗೆ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ ಎಂದು ಬೊಮ್ಮಾಯಿ ತಿಳಿಸಿದರು.

ಕಾನೂನು ಪ್ರಕಾರ ಪಿಪಿಇ ಕಿಟ್ ಖರೀದಿ : ಕೋವಿಡ್ ಹಗರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಸಂದರ್ಭದಲ್ಲಿ ಪಿಪಿಇ ಕಿಟ್ ಇರಲಿಲ್ಲ. ಜನ ಸಾಯುತ್ತಿದ್ದರು. ಆರೋಗ್ಯ ತುರ್ತುಪರಿಸ್ಥಿತಿ ಇತ್ತು‌. ವೈದ್ಯರು ಪಿಪಿಇ ಕಿಟ್ ಇಲ್ಲದಿದ್ದರೆ ಕೆಲಸ ಮಾಡಲು ಆಗುವುದಿಲ್ಲ ಎಂದು ಹೇಳಿದ್ದರು ಎಂದರು.

ಪಿಪಿಇ ಕಿಟ್ ಇಲ್ಲದಿದ್ದರೆ ಜನ ಸಾಯುತ್ತಾರೆ ಎಂಬ ಭಯ ಇತ್ತು. ಆಗ ಎಲ್ಲಿ ಸಿಗುತ್ತವೆ ಎಂದು ತಿಳಿದು ಖರೀದಿ ಮಾಡಿದ್ದೆವು. ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಲಾಗಿತ್ತು‌. ಜನರ ಪ್ರಾಣ ಉಳಿಸಲು ಕೆಲವು ನಿರ್ಣಯ ತೆಗೆದುಕೊಂಡಿದ್ದೆವು. ಅದು ಕಾನೂನು ಪ್ರಕಾರವೇ ಆಗಿದೆ. ಚುನಾವಣೆ ಸಂದರ್ಭದಲ್ಲಿ ಅವರ ಮೇಲೆ ಆರೋಪ ಬಂದಿರುವುದರಿಂದ ಗಮನ ಬೇರೆಡೆ ಸೆಳೆಯಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ವರದಿ ಸಲ್ಲಿಕೆಯಾಗಿದ್ದರೂ ಸರ್ಕಾರ ಇನ್ನೂ ಸ್ವೀಕರಿಸಿಲ್ಲ‌, ಅದನ್ನು ಲೀಕ್ ಮಾಡಿದ್ದಾರೆ‌‌ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕರ ಧ್ವನಿ ಕುಗ್ಗಿಸುವ ಪ್ರಯತ್ನ: ತಮ್ಮ ಮೇಲಿನ ಆರೋಪ ಮರೆಮಾಚಲು ವಿರೋಧ ಪಕ್ಷವನ್ನು ದಮನ ಮಾಡಿ, ವಿರೋಧ ಪಕ್ಷದ ನಾಯಕರ ಧ್ವನಿ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಆಗುವುದಿಲ್ಲ ಎಂದು ಹೇಳಿದರು.

By Veeresh

Leave a Reply

Your email address will not be published. Required fields are marked *

Verified by MonsterInsights