2023ರ ಏಕದಿನ ವಿಶ್ವಕಪ್ನಲ್ಲಿ ಕರಾರುವಾಕ್ ದಾಳಿ ಮೂಲಕ ಮೊಹಮ್ಮದ್ ಶಮಿ ಸಂಚಲನ ಸೃಷ್ಟಿಸಿದ್ದರು. 7 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದ ಶಮಿ ಒಟ್ಟು 24 ವಿಕೆಟ್ ಕಬಳಿಸುವ ಮೂಲಕ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಇದಾದ ಬಳಿಕ ಮೊಹಮ್ಮದ್ ಶಮಿ ಟೀಮ್ ಇಂಡಿಯಾ ಪರ ಕಣಕ್ಕಿಳಿದಿಲ್ಲ.
ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಕಾಣಿಸಿಕೊಳ್ಳುವುದು ಅನುಮಾನ. ಅಕ್ಟೋಬರ್ 16 ರಿಂದ ಶುರುವಾಗಲಿರುವ ಈ ಸರಣಿಗೂ ಮುನ್ನ ಶಮಿ ಸಂಪೂರ್ಣ ಫಿಟ್ನೆಸ್ ಸಾಧಿಸುವ ಸಾಧ್ಯತೆಯಿಲ್ಲ. ಅತ್ತ ಪರಿಪೂರ್ಣ ಫಿಟ್ನೆಸ್ನೊಂದಿಗೆ ಮರಳಲು ಮೊಹಮ್ಮದ್ ಶಮಿ ಕೂಡ ನಿರ್ಧರಿಸಿದ್ದಾರೆ. ಹೀಗಾಗಿಯೇ ಕಿವೀಸ್ ವಿರುದ್ಧದ ಸರಣಿಯಲ್ಲಿ ಭಾರತದ ಅನುಭವ ವೇಗಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ.
ಏಕದಿನ ವಿಶ್ವಕಪ್ 2023 ರ ವೇಳೆ ಮೊಹಮ್ಮದ್ ಶಮಿ ಅವರ ಪಾದದಲ್ಲಿ ನೋವು ಕಾಣಿಸಿಕೊಂಡಿತ್ತು. ಈ ನೋವಿನ ನಡುವೆಯೂ ಅವರು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ಇದರಿಂದ ಅವರ ಪಾದದ ಸಮಸ್ಯೆಯು ಬಿಗಡಾಯಿಸಿದೆ.
ಹೀಗಾಗಿ ಅವರು ಏಕದಿನ ವಿಶ್ವಕಪ್ ಬಳಿಕ ಯಾವುದೇ ಪಂದ್ಯವಾಡಿರಲಿಲ್ಲ. ಅಲ್ಲದೆ ವೈದ್ಯಕೀಯ ಪರಿಶೀಲನೆ ವೇಳೆ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಕಂಡು ಬಂದಿತ್ತು. ಅದರಂತೆ ಕಳೆದ ಫೆಬ್ರವರಿ ತಿಂಗಳಲ್ಲಿ ಮೊಹಮ್ಮದ್ ಶಮಿ ಸರ್ಜರಿಗೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ಐಪಿಎಲ್ನಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಮೊಹಮ್ಮದ್ ಶಮಿ ಫಿಟ್ ಆಗಿದ್ದು, ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಶಮಿ ಸಂಪೂರ್ಣ ಫಿಟ್ನೆಸ್ ಸಾಧಿಸದೇ ಟೀಮ್ ಇಂಡಿಯಾಗೆ ಮರಳುವ ಇರಾದೆಯಲ್ಲಿಲ್ಲ.