ರಾಯಚೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ನಡೆದಿರುವ ಜಾರಿ ನಿರ್ದೇಶನಾಲಯ ದಾಳಿ ಎರಡನೇ ದಿನವೂ ಮುಂದುವರಿದಿದೆ.
ವಾಲ್ಮೀಕಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದದ್ದಲ ಹಾಗೂ ಅವರ ಮಾಜಿ ಪಿಎ ಪಂಪಣ್ಣ ಮನೆಯಲ್ಲಿ ಇಡಿ ಅಧಿಕಾರಿಗಳು ಬೀಡು ಬಿಟ್ಟಿದ್ದು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ರಾಯಚೂರು ತಾಲೂಕು ಪಂಚಾಯತ್‌ನಲ್ಲಿ ಕೇಸ್ ವರ್ಕರ್ ಆಗಿ ಕೆಲಸ ಮಾಡುತ್ತಿರುವ ಪಂಪಣ್ಣ ರಾಥೋಡ್ ಕತೆ ನಿಜಕ್ಕೂ ರೋಚಕವಾಗಿದೆ. ಕಡು ಬಡತನದಲ್ಲಿ ಬೆಳೆದು ಬಂದ ಪಂಪಣ್ಣ ತಾನು ಮಹಾ ಬುದ್ದಿವಂತ ಎನ್ನುವುದನ್ನು ಈ ಹಿಂದೆಯೇ ಸಾಬೀತು ಮಾಡಿದ್ದಾರೆ. ಕನ್ನಡದ ಖಾಸಗಿ ವಾಹಿನಿಯ ರಿಯಾಲಿಟಿ ಶೋ ನಲ್ಲಿ 50 ಲಕ್ಷ ಗೆಲ್ಲುವ ಮೂಲಕ ಪಂಪಣ್ಣ ಇಡೀ ಕರ್ನಾಟಕಕ್ಕೆ ಪರಿಚಯವಾಗಿದ್ದರು.
ದೇವದುರ್ಗ ಮೂಲದ ಪಂಪಣ್ಣ ಸ್ಮಶಾನದಲ್ಲಿ ಇಡುವ ಎಡೆಯನ್ನು ತಿಂದು ಬೆಳೆದವರು ಅನ್ನೋ ವಿಚಾರ ಸಂಚಲನ ಮೂಡಿಸಿತ್ತು.
2012 ರಲ್ಲಿ ನಟ ಪುನೀತ್ ರಾಜ್ ಕುಮಾರ್ ನಡೆಸಿಕೊಡ್ತಿದ್ದ ಕನ್ನಡ ಕೋಟ್ಯಧಿಪತಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಪಂಪಣ್ಣ ಕೊನೆಯವರೆಗೂ ಉಳಿದಿದ್ದರು. ಈ ಶೋ ನಲ್ಲಿ 50 ಲಕ್ಷ ರೂ. ಗೆದ್ದಿದ್ದರು. ಒಂದು ಕೋಟಿ ರೂಪಾಯಿಗೆ ಕೇಳಿದ ಕೊನೆ ಪ್ರಶ್ನೆವರೆಗೂ ಸೇಫ್ ಆಗಿ ಆಡಿದ್ದ ಪಂಪಣ್ಣ ಬಳಿಕ ಕನ್ನಡ ಕೋಟ್ಯಧಿಪತಿಯಾಗಲು ಇದ್ದ ಕೊನೆ ಪ್ರಶ್ನೆಗೆ ಉತ್ತರಿಸಲು ಆಗದೇ ಆಟದಿಂದ ನಿರ್ಗಮಿಸಿ 50 ಲಕ್ಷ ರೂಪಾಯಿ ಪಡೆದಿದ್ದರು.
2012 ರಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದ ಪಂಪಣ್ಣ 50 ಲಕ್ಷ ರೂ. ಗೆದ್ದ ಬಳಿಕ ಅಂದಿನ ರಾಯಚೂರು ಸಂಸದರಿಗೆ ಸರ್ಕಾರಿ ಆಪ್ತ ಸಹಾಯಕರಾಗಿ ಸೇರಿಕೊಂಡರು. ಬಳಿಕ ಪಿಡಿಓ ಹುದ್ದೆಗೆ ನಿಯೋಜನೆಗೊಂಡರು. ಕಾರ್ಯಕ್ಕೆ ಹಾಜರಾಗದೇ ಜನಪ್ರತಿನಿಧಿಗಳ ಆಪ್ತ ಸಹಾಯಕ ಕೆಲಸವನ್ನೇ ಹುಡುಕಿಕೊಂಡು ಮಾಡತೊಡಗಿದ್ದರು. ಶಾಸಕ ಬಸನಗೌಡ ದದ್ದಲ್ ಅವರಿಗೂ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದರು.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com