ಮನರಂಜನೆಲೈಫ್ ಸ್ಟೈಲ್ವಿಶೇಷವೆಬ್ ಸ್ಟೋರೀಸ್

ಹೈದ್ರಾಬಾದ್​​ನಲ್ಲಿ ಮಿಸ್ ವರ್ಲ್ಡ್​​ ಸ್ಪರ್ಧೆ.. ಭಾರತದಿಂದ ಸಿನಿ ಶೆಟ್ಟಿ..

72ನೇ ಆವೃತ್ತಿಯ ವಿಶ್ವಸುಂದರಿ ಸ್ಪರ್ಧೆ ಭಾರತದಲ್ಲಿ ನಡೆಯುತ್ತಿದೆ. ತೆಲಂಗಾಣ ರಾಜಧಾನಿ ಹೈದರಾಬಾದ್​ನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಮೇ 10ರಿಂದ 31ರವರೆಗೆ ನಡೆಯಲಿರುವ ಮಿಸ್ ವರ್ಲ್ಡ್​ ಸ್ಪರ್ಧೆಯಲ್ಲಿ, 120 ದೇಶಗಳ ಸುಂದರಿಯರು ಸ್ಪರ್ಧಿಸಲಿದ್ದಾರೆ. ಬರೋಬ್ಬರಿ 30 ವರ್ಷಗಳ ಬಳಿಕ ವಿಶ್ವಸುಂದರಿ ಸ್ಪರ್ಧೆ ಆಯೋಜಿಸುವ ಅವಕಾಶ ಭಾರತಕ್ಕೆ ಲಭಿಸಿದೆ. ಹೀಗಾಗಿ ದೇಶದ ಫ್ಯಾಷನ್ ಜಗತ್ತೇ ಕಾತುರದಿಂದ ಎದುರುನೋಡುತ್ತಿದೆ.

ಈ ಬಾರಿ ಭಾರತದ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ, ತೆಲಂಗಾಣ ಮಿಸ್​ ವರ್ಲ್ಡ್​​ ಸ್ಪರ್ಧೆ ಆಯೋಜಿಸುವ ಹೊಣೆ ಹೊತ್ತಿದೆ. ವಿಶ್ವಸುಂದರಿ ಸ್ಪರ್ಧೆ ಆಯೋಜನೆ ಮೂಲಕ ತೆಲಂಗಾಣ ರಾಜ್ಯದ ಇತಿಹಾಸ, ಗತವೈಭವ, ಶ್ರೀಮಂತ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತುತಪಡಿಸಲು ಸಜ್ಜಾಗಿದೆ. ಕೈಗಾರಿಕೋದ್ಯಮಿಗಳು, ಜಾಗತಿಕ ಮಟ್ಟದ ಬ್ರ್ಯಾಂಡ್​​ಗಳು, ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಮತ್ತು ಜಾಗತಿಕ ನಕ್ಷೆಯಲ್ಲಿ ಬಹುಆಯಾಮದ ಪ್ರವಾಸೋದ್ಯಮ ಕೇಂದ್ರವಾಗಿ ಗುರುತಿಸಿಕೊಳ್ಳಲು ಸುವರ್ಣಾವಕಾಶ ಲಭಿಸಿದೆ.

ವಿಶ್ವಸುಂದರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ ಸುಂದರಿಯರು, ತೆಲಂಗಾಣ ರಾಜ್ಯದ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ಕೊಡಲಿದ್ದಾರೆ. ನಿಜಾಮರ ಕಾಲದ ವಿವಿಧ ಸ್ಮಾರಕಗಳು, ವಾರಂಗಲ್​​ನ ರಾಮಪ್ಪ ದೇವಾಲಯ, ಬುದ್ಧ ಉದ್ಯಾನ, ಚಾರ್​ ಮಿನಾರ್, ಲಾಡ್ ಬಜಾರ್, ಚೌಮಹಲ್ ಅರಮನೆ, ರಾಮೋಜಿರಾವ್ ಫಿಲ್ಮ್ಂ ಸಿಟಿ, ಸಲಾರ್ ಜಂಗ್ ಮ್ಯೂಸಿಯಂ, ಬಿರ್ಲಾ ಸೈನ್ಸ್ ಮ್ಯೂಸಿಯಂ, ಗೋಲ್ಕಂಡ ಕೋಟಿ ಸೇರಿದಂತೆ ಪ್ರಖ್ಯಾತ ದೇಗುಲಗಳಿಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಲಂಗಾಣ ಹೆಸರು ಮತ್ತಷ್ಟು ಖ್ಯಾತಿಗೊಳಿಸಲು, ಶತಪ್ರಯತ್ನ ನಡೀತಿದೆ.

ರಾಜ್ಯದ ಬ್ರ್ಯಾಂಡ್ ಇಮೇಜ್ ಹೆಚ್ಚಿಸಿಕೊಳ್ಳಲು, ಸರ್ಕಾರ ಕ್ರಿಯಾ ಯೋಜನೆಯನ್ನೂ ಸಿದ್ಧಪಡಿಸಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಮಿಸ್​ ವರ್ಲ್ಡ್​​​​ ಸ್ಪರ್ಧೆ ಯಶಸ್ವಿಗಾಗಿ ಸರ್ಕಾರದ ಹಲವು ಇಲಾಖೆಗಳಿಗೆ ಜವಾಬ್ದಾರಿ ವಹಿಸಿದ್ದಾರೆ. ಪ್ರತಿಯೊಂದು ಇಲಾಖೆಗೂ ಒಂದೊಂದು ಜವಾಬ್ದಾರಿಗಳನ್ನು ವಹಿಸಿದ್ದಾರೆ. ಕೊಂಚವೂ ಲೋಪದೋಷ ತಲೆದೂರದಂತೆ ಜಾಗ್ರತೆ ವಹಿಸಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸರ್ಕಾರ ಮಟ್ಟದಲ್ಲಿ ಸರ್ಕಾರಿ ಅಧಿಕಾರಿಗಳು, ಇಲಾಖೆಗಳಲ್ಲಾ ಕಟಿ ಬದ್ಧರಾಗಿ ಕಾರ್ಯಪ್ರವೃತ್ತವಾಗಿವೆ.

ಮಿಸ್ ಇಂಡಿಯಾ ಸಿನಿ ಶೆಟ್ಟಿ, ವಿಶ್ವಸುಂದರಿ ಸ್ಪರ್ಧೆಯಲ್ಲಿ ಹಿಂದೂಸ್ತಾನವನ್ನು ಪ್ರತಿನಿಧಿಸುತ್ತಿದ್ದಾರೆ. ಸಿನಿ ಶೆಟ್ಟಿ 2000ನೇ ವರ್ಷದಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಹುಟ್ಟಿದವರು. ಆದರೆ ಅವರ ಮೂಲ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆ. ಇವರ ತಂದೆಯ ಹೆಸರು ಸದಾನಂದ ಶೆಟ್ಟಿ. ಇವರು ತಮ್ಮ ಬಾಲ್ಯದಲ್ಲಿ ರಜಾ ದಿನಗಳನ್ನೂ ಉಡುಪಿಯಲ್ಲೇ ಕಳೆಯುತ್ತಿದ್ದರಂತೆ. ಹೀಗಾಗಿ ತುಳು ನಾಡಿನ ಕುವರಿ ಸಿನಿ ಶೆಟ್ಟಿ ಆಗಾಗ ರಾಜ್ಯಕ್ಕೆ ಭೇಟಿ ಕೊಡುತ್ತಿರುತ್ತಾರೆ. ಹುಟ್ಟಿ ಬೆಳೆದಿದ್ದು ಬೇರೆ ರಾಜ್ಯದಲ್ಲಿಯೇ ಆದರೂ ಮಾತೃ ಭಾಷೆಯನ್ನು ಮರೆತಿಲ್ಲ. ಕನ್ನಡ ಮತ್ತು ತುಳು ಭಾಷೆಯಲ್ಲಿ ಸುಲಲಿತವಾಗಿ ಮಾತನಾಡುತ್ತಾರೆ. ಮುಂಬೈನ ಘಾಟ್ಕೋಪರ್‌ನಲ್ಲಿರುವ ಸೇಂಟ್ ಡೊಮಿನಿಕ್ ಸವಿಯೊ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ನಂತರ ಮುಂಬೈನ ಎಸ್‌.ಕೆ. ಸೋಮಯ್ಯ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಸಿನಿ ಶೆಟ್ಟಿ ಭರತನಾಟ್ಯ ಕಲಾವಿದೆಯೂ ಹೌದು. ಮಾಡೆಲಿಂಗ್ನಲ್ಲಿ ಸಕ್ರಿಯರಾಗಿರುವ ಸಿನಿ ಶೆಟ್ಟಿ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. 2022ರಲ್ಲಿ ಫೆಮೀನಾ ಮಿಸ್​ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

– ಸಂಗೀತಾ ಶೆಟ್ಟಿ

Comments (0)

Your email address will not be published. Required fields are marked *

Back to top button