ರಾಜಕೀಯರಾಜ್ಯಸುದ್ದಿ

ಮೆಟ್ರೋ ದರ ಸಮರ; ‘ಏನು ತಿಂತೀರಿ ನೀವು?’ ಎಂದು ಸಿಎಂ ವಿರುದ್ಧ ತೇಜಸ್ವಿ ಸೂರ್ಯ ಗರಂ

ಬೆಂಗಳೂರು : ನಮ್ಮ ಮೆಟ್ರೋ ದರ ಏರಿಕೆ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ಸಂಸದ ತೇಜಸ್ವಿ ಸೂರ್ಯ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ, ಮೆಟ್ರೋ ದರ ಏರಿಕೆಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಕೇವಲ ಎಂಟು ತಿಂಗಳ ಹಿಂದೆಯಷ್ಟೇ ಶೇ. 71ರಷ್ಟು ದರ ಏರಿಸಿದ್ದ ಸರ್ಕಾರ, ಈಗ ಮತ್ತೆ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಈ ನಿರ್ಧಾರದಿಂದ ನಮ್ಮ ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಎಂಬ ಹಣೆಪಟ್ಟಿ ಪಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ದರ ನಿಗದಿ ಮಾಡುವ ‘ಫೇರ್ ಫಿಕ್ಸೇಷನ್ ಕಮಿಟಿ’ ಕೇಂದ್ರದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡುತ್ತಿರುವ ಹೇಳಿಕೆ ಸುಳ್ಳು,

ರಾಜ್ಯ ಸರ್ಕಾರವೇ ನಾಲ್ಕು ಬಾರಿ ಪತ್ರ ಬರೆದು ಒತ್ತಡ ಹೇರಿದ ನಂತರವಷ್ಟೇ ಈ ಸಮಿತಿ ರಚನೆಯಾಗಿದೆ. ರಾಜ್ಯದ ಅಧಿಕಾರಿಗಳೇ ಪ್ರತಿ ವರ್ಷ ದರ ಹೆಚ್ಚಳ ಮಾಡಬೇಕೆಂದು ಸಮಿತಿಗೆ ಶಿಫಾರಸು ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಿರುವ ಕಾರಣ, ಈ ಹಿಂದೆ ಬಿಎಂಆರ್‌ಸಿಎಲ್‌ಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ಇದೇ ಕಾರಣಕ್ಕೆ ಮೆಟ್ರೋ ಸಂಸ್ಥೆಯು ಜನರ ಮೇಲೆ ಬೆಲೆ ಏರಿಕೆಯ ಹೊರೆ ಹೊರಿಸುತ್ತಿದೆ ಎಂಬುದು ಸಂಸದರ ಪ್ರಮುಖ ಆರೋಪವಾಗಿದೆ.

ನಾವೇನು ಅನಕ್ಷರಸ್ಥರಾ? ನಮಗೆ ಓದಲು ಬರುವುದಿಲ್ಲವೇ?” ಎಂದು ಏಕವಚನದಲ್ಲೇ ಸಿ ಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದ್ದಾರೆ. ತಮಿಳುನಾಡಿನ ಚೆನ್ನೈ ಮೆಟ್ರೋದಲ್ಲಿ ದರ ಏರಿಕೆಯಾಗದಿದ್ದರೂ ಕರ್ನಾಟಕದಲ್ಲಿ ಮಾತ್ರ ಯಾಕೆ ದರ ಹೆಚ್ಚಿಸಲಾಗುತ್ತಿದೆ? ಈ ಬಗ್ಗೆ ಮುಖ್ಯಮಂತ್ರಿಗಳು ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ . ಒಂದು ವೇಳೆ ಸೋಮವಾರದಿಂದ ಜಾರಿಗೆ ಬರಲಿರುವ ದರ ಹೆಚ್ಚಳವನ್ನು ಹಿಂಪಡೆಯದಿದ್ದರೆ, ಮೆಟ್ರೋ ನಿಲ್ದಾಣಗಳಲ್ಲಿ ಕಪ್ಪು ಪಟ್ಟಿ ಧರಿಸಿ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button