ಕೋಲ್ಕತ್ತಾ: ಫುಟ್‌ಬಾಲ್ ಕ್ರೇಜ್ ಹೊಂದಿರುವ ಕೋಲ್ಕತ್ತಾ ಕಾಲೊಂಡು ಆಟದ ದಿಗ್ಗಜ ಲಿಯೋನೆಲ್ ಮೆಸ್ಸಿ 14 ವರ್ಷಗಳ ನಂತರ ಮೂರು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದಿದ್ದರು. ಲಿಯೋನೆಲ್ ಕಾಣಲು ಸಾಕಷ್ಟು ಜನ ಅಭಿಮಾನಿಗಳು ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಠಡಿಯಂ ಆಯೋಜನೆ ಮಾಡಿದ್ದ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಕಾರ್ಯಕ್ರಮವನ್ನು ಸರಿಯಾಗಿ ಆಯೋಜನೆ ಮಾಡದ್ದಕ್ಕೆ ಸಿಟ್ಟಾದ ಫುಟ್‌ಬಾಲ್ ಅಭಿಮಾನಿಗಳು ಕ್ರೀಡಾಂಗಣದಲ್ಲಿ ದಾಂಧಲೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ನೆಚ್ಚಿನ ಆಟಗಾರನನ್ನು ಕಾಣಬೇಕು ಎಂದು ಕಾದುಕುಳಿತಿದ್ದ ಅಭಿಮಾನಿಗಳು ಕ್ರೀಡಾಂಗಣವನ್ನು ರಣರಂಗ ಮಾಡಿದ್ದಾರೆ. ಕೋಲ್ಕತ್ತಾದ ವಿವೇಕಾನಂದ ಯುವಭಾರತಿ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಹತಾಶೆಯಿಂದ ಬಾಟಲಿಗಳನ್ನು ಎಸೆದು ಹೋರ್ಡಿಂಗ್‌ಗಳನ್ನು ಹಾನಿಗೊಳಿಸಿದ್ದಾರೆ. ಮೆಸ್ಸಿ G.O.A.T. ಟೂರ್ ಭಾಗವಾಗಿ ಇಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದ ವೀಕ್ಷಣೆಗೆ 5,000 ರೂ. ನಿಂದ ಹಿಡಿದು 25,00 ರೂ. ಟಿಕೆಟ್ ದರ ನಿಗದಿಯಾಗಿತ್ತು.
ಟಿಕೆಟ್ ಬೆಲೆ ದುಬಾರಿಯಾಗಿದ್ದರೂ ಮೆಸ್ಸಿ ನೋಡಲೆಂದು ಅಭಿಮಾನಿಗಳು ಸ್ಟೇಡಿಯಂಗೆ ಆಗಮಿಸಿದ್ದರು. ಆದರೆ ಕಾರ್ಯಕ್ರಮ ಕೇವಲ 10 ನಿಮಿಷದಲ್ಲಿ ಕೊನೆಗೊಂಡಿತು. ಇದಕ್ಕೆ ಸಿಟ್ಟಾದ ಅಭಿಮಾನಿಗಳು ಚಯರ್‌ಗಳನ್ನು ಕಿತ್ತೆಸೆದಿದ್ದಾರೆ. ನೀರಿನ ಬಾಟಲಿಗಳನ್ನು ಎಸೆದು ಆಕ್ರೋಶ ಹೊರಹಾಕಿದ್ದಾರೆ. ಮೆಸ್ಸಿ ನಾವು ನೋಡಲೇ ಇಲ್ಲ. ಕೇವಲ ರಾಜಕಾರಣಿಗಳು ಮಾತ್ರ ಮೆಸ್ಸಿ ಜೊತೆ ಫೋಟೋ, ಹ್ಯಾಂಡ್ ಶೇಕ್ ಮಾಡಿದ್ದಾರೆ. ಬಹಳ ಕೆಟ್ಟದ್ದಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ..
ಇದೇ ವಿಚಾರಕ್ಕೆ ಸಿಎಂ ಮಮತಾ ಬ್ಯಾನರ್ಜಿ ಅವರು ಈ ದುರದೃಷ್ಟಕರ ಘಟನೆಗೆ ಲಿಯೋನೆಲ್ ಮೆಸ್ಸಿ ಮತ್ತು ಎಲ್ಲಾ ಕ್ರೀಡಾ ಪ್ರೇಮಿಗಳು ಮತ್ತು ಅವರ ಅಭಿಮಾನಿಗಳಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಆಶಿಮ್ ಕುಮಾರ್ ರೇ ಅವರ ಅಧ್ಯಕ್ಷತೆಯಲ್ಲಿ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಮತ್ತು ಬೆಟ್ಟ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸದಸ್ಯರಾಗಿರುವ ತನಿಖಾ ಸಮಿತಿಯನ್ನು ರಚಿಸುತ್ತಿದ್ದೇನೆ. ಸಮಿತಿಯು ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುತ್ತದೆ ಎಂದು ಮಮತಾ ಬರೆದುಕೊಂಡಿದ್ದಾರೆ.


