Thursday, November 20, 2025
19.1 C
Bengaluru
Google search engine
LIVE
ಮನೆ#Exclusive NewsTop Newsಜಿಂದಾಲ್ ಕಂಪನಿಗೆ ಭೂಮಿ, ಬಿಜೆಪಿ ಸರ್ಕಾರದ ತೀರ್ಮಾನವೇ ಜಾರಿ: ಎಂ ಬಿ ಪಾಟೀಲ

ಜಿಂದಾಲ್ ಕಂಪನಿಗೆ ಭೂಮಿ, ಬಿಜೆಪಿ ಸರ್ಕಾರದ ತೀರ್ಮಾನವೇ ಜಾರಿ: ಎಂ ಬಿ ಪಾಟೀಲ

ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಜಿಂದಾಲ್ ಕಂಪನಿಗೆ 3,666 ಎಕರೆ ಕೊಡಲು ತೀರ್ಮಾನಿಸಿ, ಅದರಂತೆ ಸರ್ಕಾರಿ ಆದೇಶವನ್ನೂ‌ (2021ರ ಮೇ 6) ಹೊರಡಿಸಿತ್ತು. ಅದೇ ಆದೇಶವನ್ನು ಈಗ ಹೈಕೋರ್ಟ್ ಸೂಚನೆಯಂತೆ (2024ರ ಮಾ.12) ಜಾರಿ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಇದರಲ್ಲಿ ಯಾವ ಅಕ್ರಮವೂ ನಡೆದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ‌.ಬಿ ಪಾಟೀಲ ಭಾನುವಾರ ಇಲ್ಲಿ ಸ್ಪಷ್ಟಪಡಿಸಿದರು.

ಈ ವಿಷಯದಲ್ಲಿ ಸರಕಾರ ಒಳ ಒಪ್ಪಂದ ಮಾಡಿಕೊಂಡಿದೆ ಎನ್ನುವ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಅವರ ಆರೋಪ ನಿರಾಧಾರ. ಆಗೊಂದು ವೇಳೆ ಒಳ ಒಪ್ಪಂದ ಆಗಿದ್ದರೆ ಅದು ಅವರದ್ದೇ ಪಕ್ಷದ ಸರ್ಕಾರದ ಜತೆ ಆಗಿರಬೇಕು ಎಂದು ಸಚಿವ ಪಾಟೀಲ ತಿರುಗೇಟು ನೀಡಿದರು.

‘ಯಡಿಯೂರಪ್ಪ ಸರ್ಕಾರದ ಆದೇಶ ಜಾರಿಯಾಗದ ಕಾರಣ ಜಿಂದಾಲ್ ಕಂಪನಿ ಹೈಕೋರ್ಟ್ ಗೆ ಹೋಯಿತು. ಬಳಿಕ ಕೋರ್ಟ್ ಆ ಆದೇಶವನ್ನು ಪಾಲಿಸುವಂತೆ ಸೂಚಿಸಿತು. ಅದರಂತೆ ನಮ್ಮ ಸರ್ಕಾರ ನಡೆದುಕೊಂಡಿದೆ ಎಂದು ಅವರು ವಿವರಿಸಿದರು.

ಇಷ್ಟಕ್ಕೂ ಜಿಂದಾಲ್ ಕಂಪನಿ ರಾಜ್ಯದಲ್ಲಿ ₹90 ಸಾವಿರ‌ ಕೋಟಿ ಹೂಡಿಕೆ‌ ಮಾಡಿ, 50 ಸಾವಿರ ಜನರಿಗೆ ಉದ್ಯೋಗ ನೀಡಿದೆ. ಸರ್ಕಾರದ ಷರತ್ತುಗಳನ್ನು ಪಾಲಿಸಿದ ನಂತರವೂ ಅವರಿಗೆ ಜಮೀನಿನ ಗುತ್ತಿಗೆ ಮಾರಾಟ ಮಾಡದಿದ್ದರೆ ಹೂಡಿಕೆ‌ ವಲಯಕ್ಕೆ ಕೆಟ್ಟ ಸಂದೇಶ ಕೊಟ್ಟಂತಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ಬಿಜೆಪಿ ಸರ್ಕಾರ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕೊಟ್ಟ ಹಾಗೆ ನಮ್ಮ ಸರ್ಕಾರ ಜಿಂದಾಲ್ ಕಂಪನಿಗೆ ಯಾವ ರಿಯಾಯಿತಿಯನ್ನೂ ಕೊಟ್ಟಿಲ್ಲ. 20 ವರ್ಷದ ಹಿಂದೆ ಇದ್ದ ಮಾರುಕಟ್ಟೆ ದರವನ್ನು ಆಧರಿಸಿ‌ಯೇ ಭೂಮಿ ದರ ನಿಗದಿಪಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಹಿಂದಿನ ಬಿಜೆಪಿ ಸರಕಾರವು ಚಾಣಕ್ಯ ವಿಶ್ವವಿದ್ಯಾಲಯಕ್ಕೆ ದೇವನಹಳ್ಳಿ ಬಳಿ ಕೆಐಎಡಿಬಿಯ 116 ಎಕರೆ ಜಮೀನನ್ನು ಕೇವಲ 50 ಕೋಟಿ ರೂಪಾಯಿಗೆ ಭಾರಿ ರಿಯಾಯಿತಿ ದರದಲ್ಲಿ ಕೊಟ್ಟಿದೆ. ಅದರ ನೈಜ ಬೆಲೆ ಅಂದು 187 ಕೋಟಿ ರೂಪಾಯಿ ಇತ್ತು. ಇದರಲ್ಲಿ 137 ಕೋಟಿ ರೂಪಾಯಿ ಮೇಲ್ನೋಟಕ್ಕೇ ನಷ್ಟವಾಗಿದೆ. ಈ ಹಣ ಇಲ್ಲಿಯವರೆಗೂ ಕೆಐಎಡಿಬಿ ಗೂ ಸಂದಾಯವಾಗಿಲ್ಲ. ಇದರ ಬಗ್ಗೆ ಬೆಲ್ಲದ ಅವರ ಜಾಣಮೌನ ಯಾಕೆ ಎಂದು ಪಾಟೀಲ ಪ್ರಶ್ನಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments