‘ಪೊಗರು’ ಸಿನಿಮಾದ ನಂತರ ನಟ ಧ್ರುವ ಸರ್ಜಾ, ‘ಮಾರ್ಟಿನ್’ ಸಿನಿಮಾವನ್ನು ಕೈಗೆತ್ತಿಕೊಂಡಿದ್ದರು. ಎಪಿ ಅರ್ಜುನ್ ಇದರ ಡೈರೆಕ್ಟರ್ ಎಂದು ಗೊತ್ತಾದಾಗ ನಿರೀಕ್ಷೆ ಜಾಸ್ತಿಯೇ ಇತ್ತು. ಕಾರಣ, ಇವರಿಬ್ಬರು ಒಟ್ಟಿಗೆ ‘ಅದ್ಧೂರಿ’ ಅನ್ನೋ ಬ್ಲಾಕ್ ಬಸ್ಟರ್ ಸಿನಿಮಾ ಮಾಡಿದ್ದವರು. ಇದೀಗ ‘ಮಾರ್ಟಿನ್’ ಸಿನಿಮಾ ಕೊನೆಗೂ ಚಿತ್ರಮಂದಿರದ ಅಂಗಳಕ್ಕೆ ಬಂದಿದೆ.
ಪಾಕಿಸ್ತಾನದಲ್ಲಿ ಭಾರತೀಯ ವ್ಯಕ್ತಿಯೊಬ್ಬ (ಧ್ರುವ ಸರ್ಜಾ) ಸಿಕ್ಕಿಬೀಳುತ್ತಾನೆ. ಗಾಯಗೊಂಡಿರುವ ಅವನಿಗೆ ಅಲ್ಲಿನ ಮಿಲಿಟರಿ ಪಡೆ ಚಿಕಿತ್ಸೆ ನೀಡಿ, ನಂತರ ಬಂಧಿಸುತ್ತದೆ. ಆದರೆ ಅಮ್ನೇಶಿಯಾದಿಂದಾಗಿ ಆತನಿಗೆ ತಾನು ಯಾರೆಂಬುದೇ ಗೊತ್ತಿರುವುದಿಲ್ಲ. ತನ್ನ ಗುರುತನ್ನು ತಾನೇ ಪತ್ತೆ ಮಾಡುವ ದೊಡ್ಡ ಸವಾಲು ಆತನಲ್ಲಿ ಹುಟ್ಟಿಕೊಳ್ಳುತ್ತದೆ. ದೈತ್ಯನಾಗಿರುವ ಆತನಿಗೆ ಎದುರಾಳಿಗಳು ನೊಣಕ್ಕೆ ಸಮಾನ. ತನಗೆ ಅಡ್ಡ ಬಂದವರನ್ನು ಹೊಸಕಿ ಹಾಕಿ ಮುಂದೆ ಸಾಗುವ ಆತನಿಗೆ ತಾನು ಯಾರೆಂಬುದೇ ದೊಡ್ಡ ಪ್ರಶ್ನೆ! ಅಂತಿಮವಾಗಿ ಆತನಿಗೆ ಉತ್ತರ ಸಿಗುತ್ತದೆ. ಆ ಉತ್ತರವೇ ಅರ್ಜುನ್! ಅರೇ, ಈತ ಅರ್ಜುನ್ ಆದರೆ ‘ಮಾರ್ಟಿನ್’ ಯಾರು? ಇದು ಆಡಿಯೆನ್ಸ್‌ಗೆ ಹುಟ್ಟಿಕೊಳ್ಳುವ ಪ್ರಶ್ನೆ. ಹೀಗೆ ಹಲವು ಪ್ರಶ್ನೆಗಳೊಂದಿಗೆ ಸಾಗುವ ‘ಮಾರ್ಟಿನ್’ ಸಿನಿಮಾದಲ್ಲಿ ಭರಪೂರ ಆಕ್ಷನ್ ಇದೆ!
‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರಿಗೆ ಒಂದೇ ಸಿನಿಮಾದಲ್ಲಿ ಬೇರೆ ಬೇರೆ ರೀತಿಯ ಶೇಡ್‌ಗಳಲ್ಲಿ ನಟಿಸುವ ಚಾನ್ಸ್ ಸಿಕ್ಕಿದೆ. ಅದನ್ನವರು ಭಾಗಶಃ ಯಶಸ್ವಿಯಾಗಿ ನಿಭಾಯಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಕೆಲವು ಕಡೆ ಹಿಂದಿನ ಸಿನಿಮಾಗಳಲ್ಲಿನ ಅವರ ಡೈಲಾಗ್ ಡೆಲಿವರಿ ಸ್ಟೈಲ್ ಕೂಡ ರಿಪೀಟ್ ಎನಿಸುತ್ತದೆ. ಆಕ್ಷನ್ ವಿಚಾರದಲ್ಲಿ ದೂಸ್ರಾ ಮಾತೇ ಇಲ್ಲ; ಮಸ್ತ್ ಆಗಿ ಫೈಟ್ ಮಾಡಿ, ಫ್ಯಾನ್ಸ್‌ಗೆ ರಂಜಿಸುತ್ತಾರೆ ಧ್ರುವ. ಡ್ಯಾನ್ಸ್ ಮಾಡುವುದಕ್ಕೆ ಜಾಸ್ತಿ ಅವಕಾಶ ಸಿಕ್ಕಿಲ್ಲ. ಸಿಕ್ಕ ಅವಕಾಶವನ್ನೇ ಅವರು ಸದುಪಯೋಗ ಪಡಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಫ್ಯಾನ್ಸ್‌ಗೆ ಒಂದು ಸ್ಪೆಷಲ್ ಅಚ್ಚರಿ ಕೂಡ ಇದೆ. ಅದನ್ನು ಚಿತ್ರಮಂದಿರದಲ್ಲಿಯೇ ನೋಡಿ ಎಂಜಾಯ್ ಮಾಡಬೇಕು.
ನಾಯಕಿ ವೈಭವಿ ಶಾಂಡಿಲ್ಯಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಇಲ್ಲ. ಅವರು ನಾಲ್ಕೈದು ದೃಶ್ಯ, ಒಂದು ಹಾಡಿಗೆ ಸೀಮಿತ. ಚಿಕ್ಕಣ್ಣ ಇದ್ದರೂ ಅಷ್ಟೇನೂ ಹೈಲೈಟ್ ಆಗಿಲ್ಲ. ಇದ್ದಿದ್ದರಲ್ಲಿ ಅನ್ವೇಶಿ ಜೈನ್ ಒಂದಷ್ಟು ದೃಶ್ಯಗಳಲ್ಲಿ ಮಿಂಚಿದ್ದಾರೆ. ಭೂಮಿ ಶೆಟ್ಟಿ, ಸುಕೃತಾ ವಾಗ್ಳೆ, ಪ್ರತಾಪ್ ನಾರಾಯಣ್, ಅಚ್ಯುತ್ ಕುಮಾರ್ ಹೀಗೆ ಅನೇಕರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಯಾರ ಪಾತ್ರಗಳೂ ಮನಸ್ಸಿನಲ್ಲಿ ಹೆಚ್ಚು ಉಳಿಯುವುದಿಲ್ಲ. ಬೇರೆ ಬೇರೆ ಶೇಡ್‌ಗಳಲ್ಲಿ ಅಬ್ಬರಿಸಿರುವ ಧ್ರುವ ಸರ್ಜಾ ಅವರೇ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಇದು ಧ್ರುವ ಸರ್ಜಾ ಅವರ ಒನ್ ಮ್ಯಾನ್ ಶೋ ಎಂದು ಭಾಸವಾಗುತ್ತದೆ.