ಸಿನಿಮಾಸುದ್ದಿ

ಮಂತ್ರಾಲಯ ದಿವ್ಯ ಚರಿತ್ರೆ; ಖ್ಯಾತ ನಂತರ ಸಮ್ಮುಖದಲ್ಲಿ ಸಜ್ಜಾಗಿದೆ “ರಾಯರ ದರ್ಶನ”!

ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳ ಕೋಟ್ಯಂತರ ಭಕ್ತರಿಗಾಗಿ “ರಾಯರ ದರ್ಶನ” ಎಂಬ ಅದ್ಭುತ ದೃಶ್ಯ ಕಾವ್ಯವೊಂದು ಸಿದ್ಧವಾಗುತ್ತಿದೆ. ಶ್ರೀ ಲಕ್ಷ್ಮೀ ಗಣೇಶ ಪ್ರೊಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆಗಳು ಅತ್ಯಂತ ಶ್ರದ್ಧೆಯಿಂದ ನಿರ್ಮಿಸುತ್ತಿರುವ ಈ ವಿಶೇಷ ಆಲ್ಬಂ ಹಾಡಿನಲ್ಲಿ ದಕ್ಷಿಣ ಭಾರತದ ಚಿತ್ರರಂಗದ ದೈತ್ಯ ಪ್ರತಿಭೆಗಳು ಒಂದಾಗಿರುವುದು ವಿಶೇಷವಾಗಿದೆ. ಈ ಯೋಜನೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನವರಸ ನಾಯಕ ಜಗ್ಗೇಶ್ ಸೇರಿದಂತೆ 25ಕ್ಕೂ ಹೆಚ್ಚು ಖ್ಯಾತ ಕಲಾವಿದರು ಭಾಗವಹಿಸುವ ಮೂಲಕ ಆಲ್ಬಂಗೆ ತಾರಾ ಮೆರುಗು ನೀಡಿದ್ದಾರೆ. ರಾಯರ ಮಹಿಮೆಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವ ಉದ್ದೇಶದಿಂದ ಈ ಕೃತಿಯನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಅದ್ಧೂರಿಯಾಗಿ ರೂಪಿಸಲಾಗುತ್ತಿದೆ.

ಮತ್ತೊಂದು ವಿಶೇಷವೆಂದರೆ ಇದುವರೆಗೆ ಯಾರಿಗೂ ತಿಳಿಯದ ಮತ್ತು ದೃಶ್ಯ ರೂಪದಲ್ಲಿ ಕಾಣದ ರಾಯರ ಬದುಕಿನ ಕೆಲವು ಅಪರೂಪದ ಸಂಗತಿಗಳನ್ನು ಇಲ್ಲಿ ಅನಾವರಣಗೊಳಿಸಲಾಗುತ್ತಿದೆ. ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಈ ಕೆಲಸ ನಡೆಯುತ್ತಿದ್ದು, ಭಕ್ತರಲ್ಲಿ ಭಾರಿ ಕುತೂಹಲ ಮೂಡಿಸಿದೆ. ನಿರ್ದೇಶಕ ರಘು ಭಟ್ ನೇತೃತ್ವದಲ್ಲಿ ಈಗಾಗಲೇ ಮೊದಲ ಹಂತದ ಚಿತ್ರೀಕರಣವು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಫೆಬ್ರವರಿ 24 ರಿಂದ ಎರಡನೇ ಹಂತದ ಚಿತ್ರೀಕರಣಕ್ಕೆ ತಂಡ ಸಜ್ಜಾಗಿದೆ. ತಾಂತ್ರಿಕವಾಗಿ ಅತ್ಯಂತ ಶ್ರೀಮಂತವಾಗಿ ಮೂಡಿಬರುತ್ತಿರುವ ಈ ಹಾಡು ಪ್ರತಿಯೊಬ್ಬ ಭಕ್ತನ ಕಣ್ಣಿಗೆ ಹಬ್ಬದಂತೆ ಇರಲಿದೆ ಎಂಬುದು ಚಿತ್ರತಂಡದ ನಂಬಿಕೆಯಾಗಿದೆ.

ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್. ಬಾಬಿ ಅವರ ಸ್ವರ ಸಂಯೋಜನೆಯಲ್ಲಿ ಮೂಡಿಬರುತ್ತಿರುವ ಈ ಭಕ್ತಿಗೀತೆಗೆ ನಾಗಾರ್ಜುನ ಶರ್ಮ ಅವರು ಸಾಹಿತ್ಯ ಬರೆದಿದ್ದಾರೆ. ನಾಗೇಶ್ ವಿ. ಆಚಾರ್ಯ ಅವರ ಛಾಯಾಗ್ರಹಣ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಈ ಆಲ್ಬಂ ಅನ್ನು ಒಂದು ಸಿನಿಮಾದ ಮಟ್ಟಕ್ಕೆ ಕೊಂಡೊಯ್ದಿದೆ. ಸುಗುಣ ರಘು ಭಟ್ ಅವರ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ “ರಾಯರ ದರ್ಶನ” ಕೇವಲ ಹಾಡಾಗಿ ಉಳಿಯದೆ, ರಾಯರ ತತ್ವ ಮತ್ತು ಬದುಕನ್ನು ಪ್ರತಿಬಿಂಬಿಸುವ ಒಂದು ಐತಿಹಾಸಿಕ ದಾಖಲೆಯಾಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳನ್ನು ಹೊಂದಿದೆ.

Comments (0)

Your email address will not be published. Required fields are marked *

Back to top button