ಮಂಗಳೂರು: ರಾಜ್ಯದಲ್ಲಿ ಗೋಧ್ರಾ ಮಾದರಿ ಹತ್ಯಾಕಾಂಡಕ್ಕೆ ಸಂಚು ನಡೆಯುತ್ತಿದೆ ಎಂದು ಹೇಳಿಕೆ ನೀಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಅವರನ್ನು ಕೂಡಲೇ ಬಂಧನ ಮಾಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಗ್ರಹಿಸಿದರು.
ಮಂಗಳೂರಿನಲ್ಲಿ ಗುರುವಾರ ಪತ್ರಕರ್ತರ ಜತೆಗೆ ಅವರು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ದ್ವಂದ ಹೇಳಿಕೆ ನೀಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೋಡಿಕೊಂಡು ಪರಿಶೀಲಿಸುತ್ತೇವೆ ಎಂದು ಹೇಳುತ್ತಾರೆ. ಬಿ.ಕೆ.ಹರಿಪ್ರಸಾದ್ ಅವರ ಬಳಿ ಈ ಕುರಿತ ಮಾಹಿತಿ ಇದ್ದರೆ ಗೃಹ ಇಲಾಖೆಗೆ ನೀಡಬೇಕು. ಇಲ್ಲದಿದ್ದರೆ ತಕ್ಷಣವೇ ಅವರ ಬಂಧನ ಆಗಬೇಕು. ಈ ರೀತಿ ಬೇಕಾಬಿಟ್ಟಿ ಹೇಳಿಕೆ ನೀಡುವುದನ್ನು ರಾಜ್ಯದ ಜನರ ಪರವಾಗಿ ಖಂಡಿಸಲಾಗುತ್ತದೆ ಎಂದರು.
ಗೋದ್ರಾ ಘಟನೆ ನಡೆದಾಗ ಅದರ ಹಿಂದೆ ರೂವಾರಿಗಳಂತೆ ಇದ್ದದ್ದು ಕಾಂಗ್ರೆಸ್. ಗುಜರಾತ್‌ನಲ್ಲಿ ನರೇಂದ್ರ ಮೋದಿ ಅವರ ಸರಕಾರವನ್ನು ಕೇಡವಬೇಕು ಎಂದು ಹುನ್ನಾರವನ್ನು ಆಗ ಕಾಂಗ್ರೆಸ್ ನಡೆಸಿತ್ತು. ಈಗ ಮತ್ತೆ ಕಾಂಗ್ರೆಸ್‌ನ ಹಿರಿಯ ನಾಯಕ ಹರಿಪ್ರಸಾದ್ ಈ ರೀತಿ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಷಡ್ಯಂತ್ರವನ್ನು ಬಹಿರಂಗ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಿಂದೂ ರಾಷ್ಟ್ರ ಆದ ಕಾರಣಕ್ಕೆ ಈ ದೇಶದಲ್ಲಿ ಜಾತ್ಯತೀತ ತತ್ವಗಳು ಇನ್ನೂ ಉಳಿದುಕೊಂಡಿವೆ. ಹಿಂದೂ ರಾಷ್ಟ್ರ ಆಗಿರುವುದರಿಂದಲೇ ಈ ದೇಶದ ಆಡಳಿತ ಉತ್ತಮ ರೀತಿಯಲ್ಲಿ ನಡೆಯುತ್ತದೆ. ಕಾಂಗ್ರೆಸ್ ಆಡಳಿತ ಇರುವಾಗ ದೇಶದಲ್ಲಿ ಪಾಕಿಸ್ತಾನದಲ್ಲಿ ಇದ್ದಂತಹ ಆಡಳಿತ ವ್ಯವಸ್ಥೆ ಇತ್ತು ಎಂದು ಕಾಂಗ್ರೆಸ್ ವಿರುದ್ಧ ಮುಗಿಬಿದ್ದರು.
ಸಿದ್ದರಾಮಯ್ಯ ಅವರೇ ನನಗೆ ರಾಮ ಎಂಬ ಕಾಂಗ್ರೆಸ್ ಮುಖಂಡ ಎಚ್.ಆಂಜನೇಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಮನಿಗೆ ರಾಮನೇ ಹೋಲಿಕೆಯೇ ಹೊರತು, ಸಿದ್ದರಾಮಯ್ಯ ಅವರನ್ನು ಹೋಲಿಕೆ ಮಾಡುವುದು ಅಷ್ಟು ಸರಿಯಲ್ಲ. ರಾಮನ ಹೆಸರಿಟ್ಟುಕೊಂಡವರೆಲ್ಲ ರಾಮ ಆಗಲು ಸಾಧ್ಯವಿಲ್ಲ. ರಾಮ ಎಂಬುದು ಭಾವನಾತ್ಮಕ ನಂಬಿಕೆಗಳ ಸಂಕೇತ ಎಂದು ತೀವಿದರು.
ರಾಜ್ಯದಲ್ಲಿ ರಾಮ ಜನ್ಮಭೂಮಿಯ ಹೋರಾಟದ ಕರಸೇವಕರನ್ನು ಬಂಧಿಸಲಾಗುತ್ತಿದೆ. ನಾನೂ ಕರಸೇವಕ, ರಾಮಭಕ್ತ. ಸರಕಾರಕ್ಕೆ ತಾಕತ್ತೂ ಇದ್ದರೆ ನನ್ನ ಬಂಧಿಸಲಿ. ಎಲ್ಲಾ ಕರಸೇವಕರನ್ನು ಬಂಧಿಸಲಿ. ಇಲ್ಲದಿದ್ದರೆ ನಮ್ಮ ಹೋರಾಟ ನಡೆಯುತ್ತದೆ ಎಂದು ಎಚ್ಚರಿಸಿದರು.