
ಮಂಡ್ಯ: ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ನಮ್ಮ ನಡುವೆ ಒಪ್ಪಂದವಾಗಿರುವುದು ನಿಜ, ಸಮಯ ಬಂದಾಗ ಆ ಬಗ್ಗೆ ಮಾತನಾಡುವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಕ್ಕರ್ ಕೊಟ್ಟಿದ್ದಾರೆ. ನಮ್ಮ ನಡುವೆ ಯಾವ ಒಪ್ಪಂದವೂ ಆಗಿಲ್ಲ. ಹೈಕಮಾಂಡ್ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಬಂಡಬೋಯಿನಹಳ್ಳಿಯಲ್ಲಿ ಮಾತನಾಡಿದ ಅವರು, ಹೈಕಮಾಂಡ್ ತೀರ್ಮಾನದಂತೆ ನಾವು ನಡೆದುಕೊಳ್ಳುತ್ತೇವೆ. ನಮ್ಮ ಮಧ್ಯೆ ಯಾವ ಒಪ್ಪಂದವೂ ಆಗಿಲ್ಲ ಎಂದರು.
ಏನು ಹೇಳಿದ್ದರು ಡಿಕೆ ಶಿವಕುಮಾರ್?
ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ಆದರೆ, ಅಧಿಕಾರಕ್ಕೆ ಸಂಬಂಧಿಸಿ ನಮ್ಮ ನಡುವೆ ಒಪ್ಪಂದವಾಗಿರುವುದು ನಿಜ. ಅದನ್ನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಈ ಮೂಲಕ ಅಧಿಕಾರ ಹಸ್ತಾಂತರ ಕುರಿತ ವದಂತಿಗಳಿಗೆ ಮತ್ತೆ ಇಂಬು ನೀಡಿದ್ದಾರೆ.ಅಧಿಕಾರ ಹಂಚಿಕೆಗೆ ಸಂಬಂಧಿಸಿ ನಮ್ಮ ನಡುವೆ ಒಪ್ಪಂದವಾಗಿರುವುದು ನಿಜ. ಸಮಯ ಬಂದಾಗ ಆ ಬಗ್ಗೆ ಬಹಿರಂಗಪಡಿಸುವೆ ಎಂದು ಹೇಳಿದ್ದರು. ನಾನೀಗ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಮುಖ್ಯಮಂತ್ರಿ ಹುದ್ದೆ ಬಗ್ಗೆ ಈಗ ಮಾತನಾಡುವುದಿಲ್ಲ. ರಾಜ್ಯದ ಹಿತಕ್ಕಾಗಿ ಸಿದ್ದರಾಮಯ್ಯ ಹಾಗೂ ನಾನು ಜತೆಯಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹಾಗೆಂದು, ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದವಾಗಿದ್ದು ನಿಜ.
ಕಾಂಗ್ರೆಸ್ ಪಕ್ಷ, ಸ್ವಾಭಿಮಾನಿ ಒಕ್ಕೂಟದ ವತಿಯಿಂದ ಸಮಾವೇಶ: ಸಿಎಂ
ನಾಳೆ ಹಾಸನದಲ್ಲಿ ಕಾಂಗ್ರೆಸ್ ಪಕ್ಷ, ಸ್ವಾಭಿಮಾನಿ ಒಕ್ಕೂಟದ ವತಿಯಿಂದ ಸಮಾವೇಶ ನಡೆಯುತ್ತದೆ. ಸಮಾವೇಶದ ಹೆಸರಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸಮಾವೇಶದ ಹೆಸರನ್ನು ‘ಜನ ಕಲ್ಯಾಣ ಸಮಾವೇಶ’ ಎಂದು ಬದಲಾಯಿಸಲಾಗಿದೆ ಎಂಬ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ.
ಸಮಾವೇಶಕ್ಕೆ ಜನರನ್ನು ಕರೆತರುವ ಕೆಲಸವನ್ನು ಸ್ವಾಭಿಮಾನಿ ಒಕ್ಕೂಟದವರು ಮಾಡುತ್ತಾರೆ. ಸ್ವಾಭಿಮಾನಿ ಒಕ್ಕೂಟ, ಕಾಂಗ್ರೆಸ್ ಎರಡೂ ಸೇರಿ ಸಮಾವೇಶ ನಡೆಸುತ್ತವೆ ಎಂದು ಸಿದ್ದರಾಮಯ್ಯ ಹೇಳಿದರು.
ಪಕ್ಷಕ್ಕಾಗಿ ಹಣಬಲ, ತೋಳ್ಬಲ ಎರಡರ ಮೂಲಕವೂ ದುಡಿದರೂ ಸಿಎಂ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ನನ್ನ ಬಲ ಮತ್ತು ದುರ್ಬಲ ಎರಡೂ ಗೊತ್ತಿದೆ. ನನ್ನ ಶಕ್ತಿಯಿಂದಲೇ ಕೊಟ್ಟಿರುವ ಕೆಲಸ ಮಾಡಿ ಮುಗಿಸಿದ್ದೇನೆ. ನನ್ನ ದುರ್ಬಲ ಏನಂದ್ರೆ ನಾನು ಯಾವತ್ತು ಹೈಕಮಾಂಡ್ಗೆ ಬ್ಲ್ಯಾಕ್ ಮೇಲ್ ಮಾಡಿಲ್ಲ. ನಾನು ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ, ಯಾವತ್ತೂ ಹೈಕಮಾಂಡ್ ವಿರುದ್ಧ ಹೋಗುವುದಿಲ್ಲ. ನನಗೆ ಗಾಂಧಿ ಕುಟುಂಬದ ಮೇಲೆ ಪ್ರೀತಿ ಇದೆ. ಗಾಂಧಿ ಕುಟುಂಬಕ್ಕೆ ನಾನು ಲಾಯಲ್ ಆಗಿದ್ದೇನೆ. ಒಂದು ದಿನ ಅದಕ್ಕೆ ಫಲ ಸಿಗಲಿದೆ. ನಾನು ಅದಕ್ಕಾಗಿ ಕಾಯುತ್ತಿದ್ದೇನೆಂದು ತಿಳಿಸಿದರು.




