ಮಂಡ್ಯ: ಮಂಡ್ಯದಲ್ಲಿ ಇದೇ ಡಿಸೆಂಬರ್ 20 ರಿಂದ 22ರವರೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನಕ್ಕೆ ಬರುವವರನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಸಂಚಾರಿ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಡಿಸೆಂಬರ್ 20ರ ಬೆಳಗ್ಗೆ 5 ಗಂಟೆಯಿಂದ 23ರ ಬೆಳಗ್ಗೆ 6 ಗಂಟೆಯವರೆಗೆ ಮಾರ್ಗ ಬದಲಾವಣೆಯಾಗಲಿದೆ.
ಬೆಂಗಳೂರು, ರಾಮನಗರ, ತುಮಕೂರು, ಮದ್ದೂರು, ಮಳವಳ್ಳಿಯಿಂದ ಎಕ್ಸ್ ಪ್ರೆಸ್ ವೇನಲ್ಲಿ ಬರುವವರಿಗೆ ಹೊಸಬೂದನೂರು ಬಳಿ ಎಕ್ಸಿಟ್ ಆಗಿ ಸರ್ವಿಸ್ ರಸ್ತೆ, ಸಮ್ಮೇಳನದ ಮುಖ್ಯ ದ್ವಾರದ ಮೂಲಕ ಬ್ಯಾಂಕರ್ಸ್ ಕಾಲೋನಿ ರಸ್ತೆ ಮೂಲಕ ಸಮ್ಮೇಳನ ಸ್ಥಳ ತಲುಪಬಹುದು.
ಮೈಸೂರು, ಶ್ರೀರಂಗಪಟ್ಟಣ, ಪಾಂಡವಪುರದಿಂದ ಎಕ್ಸ್ ಪ್ರೆಸ್ ವೇನಲ್ಲಿ ಬರುವವರಿಗೆ ಶಶಿಕಿರಣ ಕನ್ವೆನ್ ಷನ್ ಹಾಲ್ ಎದುರಿನಲ್ಲಿ ಎಕ್ಸಿಟ್ ಆಗಬೇಕು. ಸರ್ವಿಸ್ ರಸ್ತೆ ಮೂಲಕ ಹೊಸಬೂದನೂರು ಅಂಡರ್ ಪಾಸ್ ಮೂಲಕ ಯೂ ಟರ್ನ್ ಪಡೆದು ಸರ್ವಿಸ್ ರಸ್ತೆ ಮೂಲಕ ಬ್ಯಾಂಕರ್ಸ್ ಕಾಲೋನಿ ಮೂಲಕ ಸಮ್ಮೇಳನ ಸ್ಥಳ ತಲುಪಬಹುದು.
ಮಂಡ್ಯದಿಂದ ಉಚಿತ ಸಾರಿಗೆ ಸೇವೆ:
ಮಂಡ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಸಮ್ಮೇಳನಕ್ಕೆ ಉಚಿತ ಬಸ್ ಸೇವೆ ವ್ಯವಸ್ಥೆ ಮಾಡಲಾಗಿದೆ. ಸರ್ವಿಸ್ ರಸ್ತೆಗಳಲ್ಲಿ ದ್ವಿಮುಖ ಸಂಚಾರ ನಿರ್ಬಂಧಿಸಲಾಗಿದೆ. ಚಿಕ್ಕಮಂಡ್ಯದಿಂದ ಹನಕೆರೆವರೆಗಿನ ಎರಡೂ ಬದಿಯ ಸರ್ವಿಸ್ ರಸ್ತೆಯಲ್ಲಿ ದ್ವಿಮುಖ ಸಂಚಾರ ನಿರ್ಬಂಧಿಸಲಾಗಿದೆ.
ಮದ್ದೂರು ಮತ್ತು ಶ್ರೀರಂಗಪಟ್ಟಣ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಬರುವ ವಾಹನಗಳು ಎಕ್ಸ್ ಪ್ರೆಸ್ ವೇನಲ್ಲಿ ಚಲಿಸುವುದು. ನಿರ್ಬಂಧಿತ ವಾಹನಗಳನ್ನು ಹೊರತುಪಡಿಸಿ ಎಲ್ಲಾ ವಾಹನಗಳಿಗೆ ಎಕ್ಸ್ ಪ್ರೆಸ್ ವೇನಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.
ನಾಡು-ನುಡಿ ಬಗ್ಗೆ ಅಭಿಮಾನ ಮೂಡಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಭಾಗಿಯಾಗಬೇಕು. ಆ ನಿಟ್ಟಿನಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ಡಿ.20, 21 ಎರಡು ದಿನ ರಜೆ ಘೋಷಣೆ ಮಾಡಲಾಗಿದೆ.
ಈ ನುಡಿಜಾತ್ರೆಯನ್ನ ಸಾಕಷ್ಟು ಅರ್ಥಪೂರ್ಣವಾಗಿ ನಡೆಸಲು ರಾಜ್ಯ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಂಡ್ಯ ಜಿಲ್ಲಾಡಳಿತ ಈಗಾಗಲೇ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಮಂಡ್ಯ ಹೊರವಲಯದ ಶ್ರೀನಿವಾಸ್ ಪುರದ ಬಳಿ ಸುಮಾರು 60 ಎಕರೆ ಪ್ರದೇಶದಲ್ಲಿ ನುಡಿಹಬ್ಬವನ್ನ ಆಚರಣೆ ಮಾಡಲು ತಯಾರಿ ಮಾಡಲಾಗಿದೆ.
ಕೆಆರ್ಎಸ್ ಡ್ಯಾಂ ಮಾದರಿ ಪ್ರವೇಶದ್ವಾರ: ಸಮ್ಮೇಳನದ ವೇದಿಕೆ ಸ್ಥಳದಲ್ಲಿ ಕೆ.ಆರ್.ಎಸ್ ಅಣೆಕಟ್ಟೆ ಮಾದರಿಯ ಆಕರ್ಷಕ ಪ್ರವೇಶದ್ವಾರವನ್ನು ನಿರ್ಮಾಣ ಮಾಡಲಾಗಿದೆ. ಪ್ರಧಾನ ವೇದಿಕೆಯ ಈ ಪ್ರವೇಶ ದ್ವಾರದ ವಿನ್ಯಾಸವು 40 ಅಡಿ ಎತ್ತರ ಮತ್ತು ಬರೋಬ್ಬರಿ 300 ಅಡಿ ಅಗಲ ಇದೆ.