ನಾಸಿಕ್ : ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಶೌಚಾಲಯದಲ್ಲಿ ಹಾವು ಬಿಟ್ಟು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ್ದ ಆರೋಪಿಯನ್ನು ಸೆಂಟ್ರಲ್ ರೈಲ್ವೆಯ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ತಂಡ ಯಶಸ್ವಿಯಾಗಿ ಬಂಧಿಸಿದೆ. ಬಂಧಿತ ಆರೋಪಿಯನ್ನು ನಾಸಿಕ್ ಜಿಲ್ಲೆಯ ನಿವಾಸಿ ಜಗನ್ ಅರ್ಜುನ್ ಭಾಲೆ ಎಂದು ಗುರುತಿಸಲಾಗಿದೆ.
ಈ ಘಟನೆಯು ರೈಲಿನ ಕೋಚ್ ಸಿ-16ರ ಶೌಚಾಲಯದಲ್ಲಿ ನಡೆದಿದ್ದು, ಸುಮಾರು 2.5 ಅಡಿ ಉದ್ದದ ವಿಷರಹಿತ ಇಂಡಿಯನ್ ರ್ಯಾಟ್ ಸ್ನೇಕ್ ಕಂಡುಬಂದಿತ್ತು. ಶೌಚಾಲಯದಲ್ಲಿದ್ದ ಹಾವನ್ನು ಗಮನಿಸಿದ ಪ್ರಯಾಣಿಕರು ತಕ್ಷಣ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಕೂಡಲೇ ಎಚ್ಚೆತ್ತ ಸಿಬ್ಬಂದಿ ಶೌಚಾಲಯವನ್ನು ಬಂದ್ ಮಾಡಿ ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸಿದರು. ತದನಂತರ ಸೋಲಾಪುರ ನಿಲ್ದಾಣದಲ್ಲಿ ಹಾವನ್ನು ಸುರಕ್ಷಿತವಾಗಿ ಹೊರತೆಗೆಯಲಾಯಿತು.
ಪ್ರಕರಣದ ಗಂಭೀರತೆ ಅರಿತ ಆರ್ಪಿಎಫ್ ತಂಡವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸ್ಫೋಟಕ ಸತ್ಯಾಂಶ ಬೆಳಕಿಗೆ ಬಂದಿದೆ. ಆರೋಪಿ ಜಗನ್ ಥಾಣೆ ನಿಲ್ದಾಣದಲ್ಲಿ ರೈಲು ಹತ್ತಿ ಶೌಚಾಲಯದಲ್ಲಿ ಹಾವನ್ನು ಬಿಟ್ಟು ನಂತರ ರೈಲಿನಿಂದ ಇಳಿದಿರುವುದು ದೃಶ್ಯಗಳಲ್ಲಿ ಸೆರೆಯಾಗಿತ್ತು. ತಾಂತ್ರಿಕ ಸಾಕ್ಷ್ಯಗಳು ಮತ್ತು ಮಾಹಿತಿ ನೀಡಿದವರ ನೆರವಿನಿಂದ ಆರೋಪಿಯನ್ನು ಸೆರೆಹಿಡಿಯಲಾಗಿದ್ದು, ವಿಚಾರಣೆಯ ವೇಳೆ ತಾನು ಪ್ರಯಾಣಿಕರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದಲೇ ಈ ಕೃತ್ಯ ಎಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಆರೋಪಿಯ ವಿರುದ್ಧ ರೈಲ್ವೆ ಕಾಯ್ದೆ 1989ರ ಸೆಕ್ಷನ್ 145 (ಬಿ), 147 ಮತ್ತು 153ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಲ್ಯಾಣ್ ರೈಲ್ವೆ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಹೆಚ್ಚಿನ ತನಿಖೆಗಾಗಿ ಆತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.


