ಹುಬ್ಬಳ್ಳಿ: ನಗರದಲ್ಲಿ ಆಯೋಜಿಸಲಾಗಿದ್ದ ಸಿಎಂ ಕಾರ್ಯಕ್ರಮದಲ್ಲಿ ಆಕಸ್ಮಿಕ ದುರಂತವೊಂದು ಸಂಭವಿಸಿದೆ. ಮನೆ ಹಸ್ತಾಂತರ ಕಾರ್ಯಕ್ರಮದ ಸಿದ್ಧತೆ ವೇಳೆ ರಾಜಕೀಯ ನಾಯಕರ ಬೃಹತ್ ಕಟೌಟ್‌ಗಳು ಕುಸಿದು ಬಿದ್ದಿದ್ದು, ಸ್ಥಳದಲ್ಲಿದ್ದ ಮೂವರು ಸಾರ್ವಜನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಟೌಟ್ ಅಡಿಯಲ್ಲಿ ಸಿಲುಕಿದ್ದ ಗಾಯಾಳುಗಳು ಮಂಜುನಾಥ್, ಶಾಂತಾ ಹಾಗೂ ಶಂಕರ್ ಎಂಬುವವರಿಗೆ ತೀವ್ರ ಪೆಟ್ಟು ಬಿದ್ದಿದೆ. ಕೂಡಲೇ ಇವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಹುಬ್ಬಳ್ಳಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಮನೆ ಹಸ್ತಾಂತರದ ಶುಭ ಸಮಾರಂಭಕ್ಕೆ ಸಿಎಂ ಆಗಮನಕ್ಕೂ ಮುನ್ನವೇ ಈ ಘಟನೆ ನಡೆದಿದ್ದು, ವೇದಿಕೆಯ ಮುಂಭಾಗದಲ್ಲಿ ಪ್ರಭಾವಿ ನಾಯಕರ ಬೃಹತ್ ಕಟೌಟ್‌ಗಳನ್ನು ಸಾಲಾಗಿ ಅಳವಡಿಸಲಾಗಿತ್ತು. ಈ ಕಟೌಟ್‌ಗಳು ಏಕಾಏಕಿ ಜನರ ಮೇಲೆ ಬಿದ್ದಿವೆ.
ಘಟನೆ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಜಿಲ್ಲಾ ಆರೋಗ್ಯ ಅಧಿಕಾರಿ (DHO) ಸತೀಶ್ ಹೋನಕೇರಿ ಅವರೊಂದಿಗೆ ಚರ್ಚಿಸಿ, ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ಸದ್ಯ ಮಂಜುನಾಥ್ ಎಂಬುವವರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದಿಬ್ಬರನ್ನು ಹೆಚ್ಚಿನ ನಿಗಾಕ್ಕಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬ್ಯಾನರ್ ಬಿದ್ದು ಗಾಯಗೊಂಡ ಮೂವರೂ ಪ್ರಸ್ತುತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅಗತ್ಯ ವೈದ್ಯಕೀಯ ನೆರವು ನೀಡಲಾಗುತ್ತಿದೆ” ಎಂದು ಡಿ.ಎಚ್.ಓ ಸತೀಶ್ ಹೋನಕೇರಿ ತಿಳಿಸಿದ್ದಾರೆ. ಇನ್ನು ಈ ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಕಟೌಟ್ ಅಳವಡಿಕೆಯಲ್ಲಿನ ನಿರ್ಲಕ್ಷ್ಯದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.


