Top Newsಸುದ್ದಿ

ಪುಣೆಯಲ್ಲಿ ಮತ್ತೊಂದು ಮಹಾಮಾರಿ: ಶಂಕಿತ GB ಸಿಂಡ್ರೋಮ್‌ ಗೆ ಮೊದಲ ಬಲಿ ವ್ಯಕ್ತಿ : ಸೋಂಕಿತರ ಸಂಖ್ಯೆ 101ಕ್ಕೇರಿಕೆ!

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ಗುಯಿಲಿನ್-ಬಾರೆ ಸಿಂಡ್ರೋಮ್ (ಜಿಬಿಎಸ್) ಸೋಂಕಿಗೆ ಒಳಗಾಗಿದ್ದಾರೆ ಎಂದು ಶಂಕಿಸಲಾದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಆದರೆ, ಆಘಾತಕಾರಿ ಬೆಳವಣಿಯಲ್ಲಿ ಪುಣೆಯಲ್ಲಿ ರೋಗನಿರೋಧಕ ನರ ಅಸ್ವಸ್ಥತೆಯ ಪ್ರಕರಣಗಳ ಸಂಖ್ಯೆ 100 ದಾಟಿದೆ ಎಂದು ಆರೋಗ್ಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಜಿಬಿ ಸಿಂಡ್ರೋಮ್‌ನಿಂದ ಉಂಟಾಗಿದೆ ಎಂದು ಶಂಕಿಸಲಾದ ಮಹಾರಾಷ್ಟ್ರದಲ್ಲಿ ಇದು ಬಹುಶಃ ಮೊದಲ ಸಾವಿನ ಪ್ರಕರಣವಾಗಿದೆ.

“ಭಾನುವಾರ ಪುಣೆಯಲ್ಲಿ ಒಟ್ಟು ಜಿಬಿಎಸ್ ಪ್ರಕರಣಗಳ ಸಂಖ್ಯೆ 101 ಕ್ಕೆ ಏರಿದೆ, ಇದರಲ್ಲಿ 68 ಪುರುಷರು ಮತ್ತು 33 ಮಹಿಳೆಯರು ಸೇರಿದ್ದಾರೆ. ಈ ಪೈಕಿ 16 ರೋಗಿಗಳು ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ. ಸೋಲಾಪುರದಲ್ಲಿ ಒಂದು ಶಂಕಿತ ಸಾವು ವರದಿಯಾಗಿದೆ” ಎಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಈ ಮಧ್ಯೆ, ಕ್ಷಿಪ್ರ ಪ್ರತಿಕ್ರಿಯೆ ತಂಡ (ಆರ್‌ಆರ್‌ಟಿ) ಮತ್ತು ಪುಣೆ ಮುನ್ಸಿಪಲ್ ಕಾರ್ಪೊರೇಷನ್‌ನ ಆರೋಗ್ಯ ಇಲಾಖೆ ಇಲ್ಲಿನ ಪೀಡಿತ ಸಿಂಹಗಡ್ ರಸ್ತೆ ಪ್ರದೇಶಗಳಲ್ಲಿ ಕಣ್ಗಾವಲು ಮುಂದುವರಿಸಿದೆ.

ಪುಣೆ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ 15,761, ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ 3,719 ಮತ್ತು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 6,098 ಮನೆಗಳು ಸೇರಿದಂತೆ ಒಟ್ಟು 25,578 ಮನೆಗಳನ್ನು ಇಲ್ಲಿಯವರೆಗೆ ಸಮೀಕ್ಷೆ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಜಿಬಿಎಸ್‌ ಎಂಬುದು, ರೋಗಿಯ ಪ್ರತಿಕಾಯ ಸಾಮರ್ಥ್ಯವನ್ನು ಕುಗ್ಗಿಸುವ ಬ್ಯಾಕ್ಟೀರಿಯಾ ಹಾಗೂ ವೈರಲ್‌ ಸೋಂಕಿನಿಂದ ಬರುವ ನರ ಸಂಬಂಧಿ ಅನಾರೋಗ್ಯವಾಗಿದೆ. ಇದು ಅಪರೂಪದ ಕಾಯಿಲೆಯಾಗಿದ್ದು, ದೇಹವು ಹಠಾತ್ತನೆ ಮರಗಟ್ಟುವಂತೆ ಮಾಡಿ, ಕೈ–ಕಾಲು ಹಾಗೂ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.

ಮೂಲಗಳ ಪ್ರಕಾರ ಜನವರಿ 9 ರಂದು ಆಸ್ಪತ್ರೆಗೆ ದಾಖಲಾದ ರೋಗಿಯನ್ನು ಪುಣೆ ಕ್ಲಸ್ಟರ್‌ನಲ್ಲಿ ಮೊದಲ ಜಿಬಿಎಸ್ ಪ್ರಕರಣ ಎಂದು ಶಂಕಿಸಲಾಗಿದೆ. ಆಸ್ಪತ್ರೆಗೆ ದಾಖಲಾದ ರೋಗಿಗಳಿಂದ ಪಡೆದ ಕೆಲವು ಜೈವಿಕ ಮಾದರಿಗಳಲ್ಲಿ ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ ಬ್ಯಾಕ್ಟೀರಿಯಾ ಇರುವುದು ಪರೀಕ್ಷೆಗಳಲ್ಲಿ ಕಂಡುಬಂದಿದೆ. ಸಿ ಜೆಜುನಿ ವಿಶ್ವಾದ್ಯಂತದ ಎಲ್ಲಾ ಜಿಬಿಎಸ್ ಪ್ರಕರಣಗಳಲ್ಲಿ ಮೂರನೇ ಒಂದು ಭಾಗಕ್ಕೆ ಕಾರಣವಾಗಿದೆ ಮತ್ತು ಅತ್ಯಂತ ತೀವ್ರವಾದ ಸೋಂಕುಗಳಿಗೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Comments (0)

Your email address will not be published. Required fields are marked *

Back to top button