12 ವರ್ಷಗಳ ಬಳಿಕ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಸಲು ಉತ್ತರ ಪ್ರದೇಶ ಸಜ್ಜಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಹಿಂದೂ ಧರ್ಮದ ಅತ್ಯಂತ ಮಹತ್ವದ ಮೇಳ ಇದಾಗಿದ್ದು, ಲಕ್ಷಾಂತರ ಮಂದಿ ಭಕ್ತರು ಇದರಲ್ಲಿ ಭಾಗವಹಿಸಲಿದ್ದಾರೆ. ಅನೇಕ ಮಂದಿ ಭಕ್ತರು ಸೇರುವ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಯೋಗಿ ಸರ್ಕಾರ ಸಕಲ ಸಿದ್ಧತೆಗಳೊಂದಿಗೆ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಹಾಗಿದ್ರೆ ಹೇಗೆ ನಡೆಯಲಿದೆ ಮಹಾ ಕುಂಭಮೇಳ ? ಸಿದ್ಧತೆ ಹೇಗಿದೆ ? ವಿಶೇಷತೆಗಳೇನು ?
ಮಹಾ ಕುಂಭಮೇಳ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಕುಂಭಮೇಳವನ್ನು ಯಶಸ್ವಿಯಾಗಿ ಆಯೋಜಿಸುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ನಾಲ್ಕು ತಾಲೂಕುಗಳನ್ನು ಒಳಗೊಂಡ ‘ಮಹಾಕುಂಭ ನಗರವನ್ನು’ ಹೊಸ ಜಿಲ್ಲೆಯಾಗಿ ಘೋಷಿಸಿದೆ. ಈ ಬಾರಿ 2025 ರ ಜ.14ರಿಂದ ಫೆ.26ರವರೆಗೆ ಮಹಾ ಕುಂಭಮೇಳ ನಡೆಯಲಿದೆ. ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳು ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ ಮಿಂದೇಳುವ ಮೂಲಕ ತನ್ನ ಪಾಪಗಳಿಂದ ಮುಕ್ತಿ ಪಡೆಯುವ ಅವಕಾಶವನ್ನು ಭಕ್ತರಿಗೆ ನೀಡಲಾಗುತ್ತದೆ. 12 ವರ್ಷಗಳಿಗೊಮ್ಮೆ ಪ್ರಯಾಗ್‌ರಾಜ್, ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ್‌ನಲ್ಲಿ ಮಹಾ ಕುಂಭಮೇಳ ನಡೆಸಲಾಗುತ್ತದೆ. ಈ ಬಾರಿ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯಲಿದೆ. ಈ ಕುಂಭಮೇಳ 30 ರಿಂದ 45 ದಿನಗಳವರೆಗೆ ನಡೆಯುತ್ತದೆ.
ಐತಿಹಾಸಿಕ ಹಿನ್ನೆಲೆ;
ಮಹಾ ಕುಂಭಮೇಳಕ್ಕೆ ತನ್ನದೇ ಆದ ಪೌರಾಣಿಕ ಹಿನ್ನೆಲೆ ಇದೆ. ಮಹಾ ಕುಂಭಮೇಳ ಆಚರಣೆಯು ಸಮುದ್ರ ಮಂಥನ ಕಥೆಯಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಅಮೃತ ಮಡಿಕೆ ನಾಲ್ಕು ಕಡೆಗಳಲ್ಲಿ ಬಿತ್ತು. ಆ ನಾಲ್ಕು ಸ್ಥಳಗಳೇ ಪ್ರಯಾಗ್‌ರಾಜ್, ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ್. ಅಂದಿನಿಂದ ಈ ಸ್ಥಳಗಳನ್ನು ಪವಿತ್ರ ಸ್ಥಳಗಳೆಂದು ಪೂಜಿಸಲಾಗುತ್ತಿದೆ. ಮೋಕ್ಷವನ್ನು ಪಡೆಯುವ ಸಲುವಾಗಿ ಈ ಸ್ಥಳಗಳಲ್ಲಿ ಮಹಾ ಕುಂಭಮೇಳ ನಡೆಸಲಾಗುತ್ತದೆ.
ಎಐ ಸಿಸಿಟಿವಿ ಅಳವಡಿಕೆ:
ಮಹಾ ಕುಂಭಮೇಳಕ್ಕೆ ಭೇಟಿ ನೀಡುವ ಯಾತ್ರಿಕರ ನಿಖರ ಸಂಖ್ಯೆಯನ್ನು ತಿಳಿದುಕೊಳ್ಳುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ಕೃತಕ ಬುದ್ಧಿಮತ್ತೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ. ಬಹುತೇಕ ಯಾತ್ರಿಕರು ಮುಂಜಾನೆ 3 ರಿಂದ ಬೆಳಗ್ಗೆ 7 ರವರೆಗೆ ತೀರ್ಥಸ್ನಾನಕ್ಕೆ ತೆರಳುತ್ತಾರೆ. ಹೀಗಾಗಿ ಎಐ ಆಧಾರಿತ ಸಿಸಿ ಕ್ಯಾಮೆರಾಗಳು ಇದೇ ಸಮಯದಲ್ಲಿ ಭಕ್ತರ ಲೆಕ್ಕ ಹಾಕಿ ಪ್ರತಿ ನಿಮಿಷಕ್ಕೊಮ್ಮೆ ಪರಿಷ್ಕೃತ ಮಾಹಿತಿಯನ್ನು ಒದಗಿಸಲಿದೆ. 95% ನಿಖರತೆಯನ್ನು ಇದು ಸಾಧಿಸಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.ಪ್ರಯಾಗ್‌ರಾಜ್‌ನ 200 ಸ್ಥಳಗಳಲ್ಲಿ 744 ತಾತ್ಕಾಲಿಕ ಹಾಗೂ 268 ಕಡೆಗಳಲ್ಲಿ 1107 ಶಾಶ್ವತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ 100ಕ್ಕೂ ಹೆಚ್ಚು ಪಾರ್ಕಿಂಗ್ ಜಾಗಗಳಲ್ಲಿ 720 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಉದ್ದೇಶಿಸಿದ್ದು, ಸುಗಮ ಸಂಚಾರಕ್ಕೆ ಹಾಗೂ ಜನದಟ್ಟಣೆ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾದೇಶಿಕ ಆಯುಕ್ತ ವಿಜಯ್ ವಿಶ್ವಾಸ್ ಪಂತ್ ಮಾಹಿತಿ ನೀಡಿದ್ದಾರೆ.
ಗೂಗಲ್‌ನಿಂದ ‘ನ್ಯಾವಿಗೇಷನ್ ಸಿಸ್ಟಮ್’:
ಮಹಾ ಕುಂಭಮೇಳಕ್ಕಾಗಿ ವಿಶೇಷ ನ್ಯಾವಿಗೇಷನ್ ಸಿಸ್ಟಮ್ ಅನ್ನು ಗೂಗಲ್ ಅಭಿವೃದ್ಧಿಪಡಿಸುತ್ತಿದೆ. ಗೂಗಲ್ ತಾತ್ಕಾಲಿಕ ನಗರಕ್ಕೆ ನ್ಯಾವಿಗೇಷನ್ ಸಿಸ್ಟಮ್ ಅನ್ನು ರಚಿಸುತ್ತಿರುವುದು ಇದೇ ಮೊದಲು. ಇದು ಪ್ರವಾಸಿಗರಿಗೆ ಅಥವಾ ಭಕ್ತರಿಗೆ ಪ್ರಮುಖ ರಸ್ತೆಗಳು, ಧಾರ್ಮಿಕ ಸ್ಥಳಗಳು, ಘಾಟ್‌ಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
ಐಷಾರಾಮಿ ಟೆಂಟ್ ಸಿಟಿ:
ಯಾತ್ರಾರ್ಥಿಗಳ ಸಂಚಾರಕ್ಕೆ ಅನುವಾಗಲು ಹಾಗೂ ಪರಿಸರಸ್ನೇಹಿ ಪ್ರಯಾಣ ಖಚಿತಕ್ಕಾಗಿ ಆ್ಯಪ್ ಆಧಾರಿತ ಇ-ರಿಕ್ಷಾ ಸೇವೆಯನ್ನು ಸರ್ಕಾರ ಒದಗಿಸುತ್ತಿದೆ. ಯಾತ್ರಾರ್ಥಿಗಳಿಗಾಗಿ ಟೆಂಟ್ ಸಿಟಿ ನಿರ್ಮಿಸಲಾಗುತ್ತಿದೆ. ವಿಲ್ಲಾ, ಮಹಾರಾಜ, ಸ್ವಿಜ್ ಕಾಟೇಜ್, ಡಾರ್ಮೆಟ್ರಿ ಎಂಬ 4 ವಿಧಗಳ ಟೆಂಟ್ ಇರಲಿದ್ದು, ಐಷಾರಾಮಿ ಸೇವೆಯ 2000 ಸ್ವಿಜ್ ಕಾಟೇಜ್‌ಗಳನ್ನೂ ನಿರ್ಮಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ಮಾಹಿತಿ ಒದಗಿಸಲು ಚಾಟ್‌ಬಾಟ್:
ಭಾರತ ತಂತ್ರಜ್ಞಾನದಲ್ಲಿ ಸಾಧಿಸುತ್ತಿರುವ ಪ್ರಗತಿಯನ್ನು ಕುಂಭಮೇಳಕ್ಕೂ ವಿಸ್ತರಿಸಿದೆ. ಪ್ರಯಾಣಿಕರಿಗೆ ನೆರವು ನೀಡುವುದಕ್ಕಾಗಿ ಕೃತಕ ಬುದ್ಧಿಮತ್ತೆ ಚಾಟ್‌ಬಾಟನ್ನು ಸ್ಥಾಪನೆ ಮಾಡಿದೆ. ಈ ಚಾಟ್‌ಬಾಟ್ ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಇದೊಂದು ಆ್ಯಪ್ ಆಗಿದ್ದು, ‘ಓಲಾ ಕೃತಿಮ್’ ಇದನ್ನು ತಯಾರು ಮಾಡಿದೆ. ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮರಾಠಿ, ಮಲಯಾಳ, ಉರ್ದು, ಗುಜರಾತಿ, ಪಂಜಾಬಿ ಮತ್ತು ಬೆಂಗಾಲಿಗಳಲ್ಲಿ ಇದು ಮಾಹಿತಿ ಒದಗಿಸಲಿದೆ. ಅಲ್ಲದೇ ಇಡೀ ಕುಂಭಮೇಳದ ಮ್ಯಾಪ್ ಒದಗಿಸಲಿದ್ದು, ಕುಂಭಮೇಳದ ಇತಿಹಾಸ, ಪದ್ಧತಿ ಸೇರಿದಂತೆ ಹಲವು ಮಾಹಿತಿಯನ್ನು ಒದಗಿಸಲಿದೆ.
ಏಕಮಾರ್ಗ:
ಮಹಾ ಕುಂಭದ ಸಮಯದಲ್ಲಿ ಸುಗಮ ಸಂಚಾರಕ್ಕಾಗಿ 7 ಪ್ರಮುಖ ಮಾರ್ಗಗಳಲ್ಲಿ ಏಕಮುಖ ಮಾರ್ಗ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ. ಇದರಲ್ಲಿ ಜಾನ್‌ಪುರ, ವಾರಣಾಸಿ, ಮಿರ್ಜಾಪುರ, ರೇವಾ, ಕಾನ್ಪುರ, ಲಕ್ನೋ ಮತ್ತು ಅಯೋಧ್ಯೆ-ಪ್ರತಾಪಗಢ ಸೇರಿದೆ.
ಪಾರ್ಕಿಂಗ್ ಸೌಲಭ್ಯ:
ಒಟ್ಟು 101 ಪಾರ್ಕಿಂಗ್ ಸೈಟ್‌ಗಳನ್ನು ಪ್ರಸ್ತಾಪಿಸಿದ್ದು, ಸುಮಾರು 5 ಲಕ್ಷ ವಾಹನಗಳಿಗೆ ಅವಕಾಶ ಕಲ್ಪಿಸುತ್ತದೆ. ಭಾರೀ ಹಾಗೂ ಲಘು ವಾಹನಗಳಿಗೆ ಪ್ರತ್ಯೆಕ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ.
ಶಟಲ್ ಸೇವೆ:
ಮಹಾ ಕುಂಭದ ಸಮಯದಲ್ಲಿ 550 ಶಟಲ್ ಬಸ್ಸುಗಳು ಹಾಗೂ 20,000 ಇ ರಿಕ್ಷಾಗಳು ವಿವಿಧ ಪ್ರದೇಶಗಳಲ್ಲಿ ಪ್ರಯಾಣಿಕರಿಗೆ ಸೌಲಭ್ಯ ಒದಗಿಸುತ್ತದೆ. ಕುಂಭ ಮೇಳ ನಡೆಯುವ ಪ್ರದೇಶದಲ್ಲಿ 100 ಡಿಜಿಟಲ್ ಬೋರ್ಡ್ ಹಾಗೂ 80 ವಿಎಂಡಿ ಅಳವಡಿಸಲಾಗುತ್ತದೆ. ಇದರಿಂದ ಯಾತ್ರಾರ್ಥಿಗಳಿಗೆ ಸಂಚಾರ ಮಾರ್ಗ ಮತ್ತು ಪಾರ್ಕಿಂಗ್ ಸ್ಥಿತಿಯಂತಹ ವಿವಿಧ ವಿವರಗಳನ್ನು ಒದಗಿಸುತ್ತದೆ.
ಮಹಾ ಕುಂಭದ ಅವಧಿಯಲ್ಲಿ 18,000 ಆರ್‌ಪಿಎಫ್ ಮತ್ತು ಜಿಆರ್‌ಪಿ ಯೋಧರನ್ನು ನಿಯೋಜಿಸಲಾಗಿದೆ. ಇದರಲ್ಲಿ ಆರ್‌ಪಿಎಫ್ ಯೋಧರ ಸಂಖ್ಯೆ 8,000 ಮತ್ತು ಜಿಆರ್‌ಪಿ ಸೈನಿಕರ ಸಂಖ್ಯೆ 10,000 ಇರಲಿದೆ. ಅಲ್ಲದೇ ದೇಶಾದ್ಯಂತ 13,000 ರೈಲ್ವೆ ಅಧಿಕಾರಿಗಳು ಮತ್ತು ನೌಕರರನ್ನು ಇಲ್ಲಿಗೆ ನಿಯೋಜಿಸಲಾಗುತ್ತಿದೆ. ಹಿಂದಿ ಮತ್ತು ಇಂಗ್ಲಿಷ್ ಜೊತೆ ದಕ್ಷಿಣ ಭಾರತ, ಪಂಜಾಬಿ, ಬೆಂಗಾಲಿ, ಮರಾಠಿ, ಗುಜರಾತಿ ಇತ್ಯಾದಿ ಮಾತನಾಡಬಲ್ಲ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಮಹಾ ಕುಂಭಮೇಳದ ಸಂದರ್ಭದಲ್ಲಿ ಭಕ್ತರಿಗೆ ಸ್ಥಳಾವಾಕಾಶ ಕಲ್ಪಿಸಲು 3,000 ವಿಶೇಷ ರೈಲುಗಳನ್ನು ಒಳಗೊಂಡಮತೆ 45 ದಿನಗಳಲ್ಲಿ ಒಟ್ಟು 13,000 ರೈಲುಗಳು ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.