ಬೆಂಗಳೂರು: ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲುತೂರಾಟ ಪ್ರಕರಣದ ಬಗ್ಗ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾರೋ ಗುಂಪು ಕಟ್ಟಿಕೊಂಡು ಗಲಾಟೆ ಮಾಡಿದ್ದಾರೆ. ಈಗಾಗಲೇ 21 ಜನರನ್ನ ಅರೆಸ್ಟ್ ಮಾಡಲಾಗಿದೆ. ಗಣೇಶ ವಿಸರ್ಜನೆಯಲ್ಲಿ ಮದ್ದೂರಿನಲ್ಲಿ ಮಾತ್ರ ಗಲಾಟೆ ಆಗಿದೆ. ರಾಜ್ಯದ ಬೇರೆ ಕಡೆ ಎಲ್ಲಿಯೂ ಇಂತಹ ಗಲಾಟೆ ನಡೆದಿಲ್ಲ. ಪೊಲೀಸರು ಯಾವುದೇ ತಪ್ಪು ಮಾಡಿಲ್ಲ. ಯಾರೇ ತಪ್ಪು ಮಾಡಿದ್ರು ಕಾನೂನು ರೀತಿ ಕ್ರಮ ಆಗುತ್ತೆ. ಬಿಜೆಪಿಯವರು ಅನವಶ್ಯಕವಾಗಿ ಪ್ರಚೋದನೆ ಮಾಡುವುದರಲ್ಲಿ ನಿಸ್ಸೀಮರು. ಸಮಾಜದ ಸ್ವಾಸ್ಥ್ಯ, ನೆಮ್ಮದಿ ಕೆಡಿಸುವುದರಲ್ಲಿ ನಿಸ್ಸೀಮರು. ಅನಗತ್ಯವಾಗಿ ಗುಂಪು ಸೇರಿ ಗಲಾಟೆ ಮಾಡಿಸುವವರು, ಮಾಡುವವರ ಮೇಲೆ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮದ್ದೂರಿಗೆ ಹೋಗುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡಿ ಅವರು ನೀಡುವ ವರದಿ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಮೆರವಣಿಗೆ ಸಂದರ್ಭದಲ್ಲಿ ಬಾವುಟ ತೆರವು ಮಾಡುವ ವೇಳೆ ಗಲಾಟೆ ನಡೆದಿದೆ ಎಂಬ ಮಾಹಿತಿಯಿದೆ. ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೆ ಹಿಂಸಾಚಾರ ನಡೆಯುತ್ತಿರಲಿಲ್ಲವಲ್ಲಾ ಎಂದು ಕೇಳಿದ್ದಕ್ಕೆ ಸಿಎಂ, ಅಲ್ಲಿ ಏನು ನಡೆದಿದೆ ಎಂದು ವರದಿ ಸಂಪೂರ್ಣ ಬಂದ ಮೇಲೆ ತೀರ್ಮಾನ ಮಾಡುತ್ತೇವೆ ಎಂದರು.
ಇನ್ನು ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರ ದಸರಾ ಉದ್ಘಾಟನೆಗೆ ವಿರೋದಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಅರ್ಜಿ ಸಲ್ಲಿಸಿರುವ ವಿಚಾರದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಆಹ್ವಾನ ಹಿಂಪಡೆಯುವಂತೆ ರಾಜ್ಯ ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ನಲ್ಲೇ ತೀರ್ಮಾನ ಆಗಲಿ.
ನಿಸಾರ್ ಅಹ್ಮದ್ ಅವರನ್ನ ಆಯ್ಕೆ ಮಾಡಿದಾಗ ಕೋರ್ಟ್ ಗೆ ಹೋಗಿಲ್ಲ. ಮಿರ್ಜಾ ಇಸ್ಮಾಯಿಲ್, ಟಿಪ್ಪು ಇದ್ದಾಗ ಕೋರ್ಟ್ ಗೆ ಹೋಗಿಲ್ಲ ಎಂದು ಪ್ರತಾಪ್ ಸಿಂಹ ವಿರುದ್ದ ಸಿಎಂ ಸಿದ್ದರಾಮಯ್ಯ ಮಾತಿನಲ್ಲೇ ಚಾಟಿ ಬೀಸಿದ್ದಾರೆ..