ಬಿಜೆಪಿ ಈಗಾಗಲೇ ಮೊದಲ 195 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನ ರಿಲೀಸ್ ಮಾಡಿದೆ. ಇತ್ತ ಕಾಂಗ್ರೆಸ್ ಪಕ್ಷ ಕೂಡ ತನ್ನ ಅಭ್ಯರ್ಥಿಗಳನ್ನ ಫೈನಲ್ ಮಾಡೋಕೆ ರಾಜ್ಯಗಳಿಂದ ಪಟ್ಟಿ ತರಿಸಿಕೊಂಡು ಕೂತಿದೆ. ಇತ್ತ ರಾಜ್ಯ ಕಾಂಗ್ರೆಸ್ ನಿಂದಲೂ 16 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನ ಫೈನಲ್ ಮಾಡಿ ಹೈಕಮಾಂಡ್ಗೆ ರವಾನೆ ಮಾಡಲಾಗಿದೆ.

ಈ ವಾರಾಂತ್ಯದೊಳಗೆ ದೆಹಲಿಯಲ್ಲಿ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ರಾಜ್ಯದ ಹದಿನಾರಕ್ಕೂ ಹೆಚ್ಚು ಕ್ಷೇತ್ರಗಳು ಸೇರಿದಂತೆ ಗೊಂದಲವಿಲ್ಲದ ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ.ಈ ಸಭೆಯ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸಂಭವನೀಯರ ಪಟ್ಟಿಯನ್ನು ಮಾಡಿ ದೆಹಲಿಗೆ ಕಳುಹಿಸಿದ್ದಾರೆ.

ಮೊದಲ 15 ಮಂದಿಯ ಪಟ್ಟಿಯಲ್ಲಿ ಹಾಲಿ ಸಚಿವರ ಪೈಕಿ ಒಬ್ಬರ ಹೆಸರು ಮಾತ್ರ ಇದೆ. ಅದು ಕೋಲಾರ ಕ್ಷೇತ್ರಕ್ಕೆ ಕೆ.ಎಚ್‌. ಮುನಿಯಪ್ಪ. ಇನ್ನು ಹಾಲಿ ಶಾಸಕರ ಪೈಕಿ ಬೆಂಗಳೂರು ಕೇಂದ್ರಕ್ಕೆ ಎನ್‌.ಎ. ಹ್ಯಾರೀಸ್‌ ಅವರ ಹೆಸರು ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ಅವರ ಹೆಸರನ್ನು ಕಲಬುರಗಿ ಕ್ಷೇತ್ರಕ್ಕೆ ಅಖೈರುಗೊಳಿಸಲಾಗಿದೆ.

ಉಳಿದಂತೆ ಶಿವಮೊಗ್ಗ ಕ್ಷೇತ್ರಕ್ಕೆ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್ ಅವರ ಪತ್ನಿ ಗೀತಾ ಶಿವರಾಜಕುಮಾರ್‌, ಬೆಂಗಳೂರು ಗ್ರಾಮಾಂತರಕ್ಕೆ ಡಿ.ಕೆ. ಸುರೇಶ್‌, ಮಂಡ್ಯ ಕ್ಷೇತ್ರಕ್ಕೆ ಸ್ಟಾರ್‌ ಚಂದ್ರು (ವೆಂಕಟೇರಮಣಗೌಡ), ಮೈಸೂರಿಗೆ ಲಕ್ಷ್ಮಣ್‌, ಹಾಸನಕ್ಕೆ ಶ್ರೇಯಸ್‌ ಪಟೇಲ್‌, ತುಮಕೂರಿಗೆ ಈಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮುದ್ದಹನುಮೇಗೌಡ, ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ ಸೇರಿ 16 ಕ್ಷೇತ್ರಗಳ ಪಟ್ಟಿ ಸಂಭವ್ಯ ಅಭ್ಯರ್ಥಿಗಳ ಪಟ್ಟಿ ಕಳಿಸಿಕೊಡಲಾಗಿದೆ. ಅಂತಿಮ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡಲು ನಿರ್ಧರಿಸಲಾಗಿದೆ
ಇನ್ನು ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗ್ಡೆ ಅವರ ಹೆಸರು ಪರಿಗಣಿಸಲಾಗಿದ್ದರೂ, ಜಿಲ್ಲೆಯ ಶಾಸಕರು ತೀವ್ರ ವಿರೋಧ ಮಾಡುತ್ತಿರುವುದರಿಂದ ಇನ್ನೂ ಗೊಂದಲವಿದೆ. ಜಿಲ್ಲಾಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷರಾಗಿರುವ ಡಾ. ಅಂಶುಮಂತ್‌ ಅವರ ಹೆಸರು ಪರಿಗಣನೆಯಲ್ಲಿದೆ.
ಸಂಭವ್ಯ ಪಟ್ಟಿ ಹೀಗಿದೆ ನೋಡಿ:

ಬೆಂಗಳೂರು ಗ್ರಾಮಾಂತರ – ಡಿ.ಕೆ. ಸುರೇಶ್‌ ಮಂಡ್ಯ – ಸ್ಟಾರ್ ಚಂದ್ರು (ವೆಂಕಟರಮಣಗೌಡ), ತುಮಕೂರು- ಎಸ್‌.ಪಿ. ಮುದ್ದಹನುಮೇಗೌಡ, ಮೈಸೂರು- ಎಂ. ಲಕ್ಷ್ಮಣ್, ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ, ಕೋಲಾರ- ಕೆ.ಎಚ್‌. ಮುನಿಯಪ್ಪ, ಬೆಂಗಳೂರು ಕೇಂದ್ರ-ಎನ್‌.ಎ. ಹ್ಯಾರೀಸ್‌ ಅಥವಾ ಟಬು ದಿನೇಶ್ ಗುಂಡೂರಾವ್, ಬೆಂಗಳೂರು ದಕ್ಷಿಣ- ಸೌಮ್ಯಾ ರೆಡ್ಡಿ, ಬೆಂಗಳೂರು ಉತ್ತರ-ಕುಸುಮ ಹನುಮಂತೇಗೌಡ, ಹಾಸನ- ಶ್ರೇಯಸ್‌ ಪಟೇಲ್, ಶಿವಮೊಗ್ಗ – ಗೀತಾ ಶಿವರಾಜಕುಮಾರ್, ಚಿತ್ರದುರ್ಗ- ಬಿ.ಎನ್. ಚಂದ್ರಪ್ಪ, ವಿಜಯಪುರ- ಮಾಜಿ ಶಾಸಕ ರಾಜು ಅಲಗೂರು, ಬೀದರ್‌- ರಾಜಶೇಖರ್ ಪಾಟೀಲ್, ಕಲಬುರಗಿ- ರಾಧಾಕೃಷ್ಣ, ಉಡುಪಿ-ಚಿಕ್ಕಮಗಳೂರು- ಜಯಪ್ರಕಾಶ್‌ ಹೆಗ್ಡೆ/ ಡಾ. ಅಂಶುಮಂತ್

By admin

Leave a Reply

Your email address will not be published. Required fields are marked *

Verified by MonsterInsights