ಉಳ್ಳಾಲ: ಕನ್ನಡ ಮತ್ತು ತುಳು ಭಾಷೆಯ ಉನ್ನತಿಗಾಗಿ ಶ್ರಮಿಸಿದ್ದ ಪ್ರೊ. ಅಮೃತ ಸೋಮೇಶ್ವರ (88) ಅವರು ಶನಿವಾರ ಬೆಳಿಗ್ಗೆ ಸೋಮೇಶ್ವರದ ತಮ್ಮ ನಿವಾಸ ಒಲುಮೆಯಲ್ಲಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಅವರಿಗೆ ಪತ್ನಿ ನರ್ಮದಾ, ಮಕ್ಕಳಾದ ಚೇತನ್ ಸೋಮೇಶ್ವರ, ಜೀವನ್ ಸೋಮೇಶ್ವರ, ಸೊಸೆಯಂದಿರು ರಾಜೇಶ್ವರಿ, ಸತ್ಯ ಜೀವನ್, ಮೊಮ್ಮಕ್ಕಳಾದ ಸೃಜನ್ ಸೋಮೇಶ್ವರ ಹಾಗೂ ಸೃಷ್ಟಿ ಸೋಮೇಶ್ವರ ಇದ್ದಾರೆ.
ಕರಾವಳಿ ಕರ್ನಾಟಕದ ಯಕ್ಷಗಾನ, ಜಾನಪದ, ಭೂತಾರಾಧನೆ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆಸಿ ನೂರಕ್ಕೂ ಹೆಚ್ಚು ಕೃತಿಯನ್ನು ಹೊರ ತಂದ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ತುಳುವಿನಲ್ಲಿ ಕವನ ಸಂಗ್ರಹ, ಪಾಡ್ದನ ಸಂಗ್ರಹ, ನಾಟಕ, ಅನುವಾದಿತ ಕಾವ್ಯ, ನೃತ್ಯ ರೂಪಕ, ರೆಡಿಯೋ ರೂಪಕ, ಅನುವಾದಿತ ನಾಟಕ, ತುಳು ಜಾನಪದ ಕುರಿತಾದ ಸಂಶೋಧನೆ, ಸ್ವತಂತ್ರ ಗಾದೆ, ಭಕ್ತಿಗೀತೆ, ಭಾವಗೀತೆಗಳ ಕೃತಿಗಳನ್ನು ರಚಿಸಿದ್ದರು.
ಮಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ 2020 ನೇ ಸಾಲಿನ ಗೌರವಶ್ರೀ ಪ್ರಶಸ್ತಿ, ಮಣಿಪಾಲ ಅಕಾಡೆಮಿಯ ಮಾಹೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.
ತುಳು ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ 2016ನೇ ಸಾಲಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸೋಮೇಶ್ವರ ಪುರಸಭೆ ಕಚೇರಿ ಬಳಿಯ ಅವರ ಸ್ವಗೃಹದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.