ಬೆಂಗಳೂರು: ಬೆಂಗಳೂರಿನ ಜನರ ಸಮಸ್ಯೆ ಬಗೆಹರಿಸಲು ಕೊನೆಗೂ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮುಂದಾಗಿದ್ದಾರೆ. ಕಳೆದ 5 ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆದಿಲ್ಲ. ಚುನಾವಣೆ ನಡೆಯದ ಹಿನ್ನೆಲೆ ಪಾಲಿಕೆ ವ್ಯಾಪ್ತಿಯಲ್ಲಿ ಹಲವಾರು ಸಮಸ್ಯೆಗಳು ತಲೆದೂರಿದ್ದು, ಜನರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇದೀಗ ಬಿಬಿಎಂಪಿ ಮುಖ್ಯ ಆಯುಕ್ತರೇ ಈ ಕೆಲಸಕ್ಕೆ ಮುಂದಾಗಿದ್ದಾರೆ.
ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ ಸಾರ್ವಜನಿಕ ಕುಂದು ಕೊರತೆಗಳನ್ನು ಪರಿಹರಿಸಲು ಹಾಗೂ ವಲಯ ಮಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ ಚಟುವಟಿಕೆಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸುವ ಸಲುವಾಗಿ, ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ‘ಮುಖ್ಯ ಆಯುಕ್ತರ ನಡೆ-ವಲಯದ ಕಡೆ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರಿಂದ ಕುಂದು-ಕೊರತೆ ಹಾಗೂ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಪ್ರತಿ ತಿಂಗಳ ಮೊದಲನೇ ಶುಕ್ರವಾರ ಪಶ್ಚಿಮ ವಲಯ, ಪ್ರತಿ ತಿಂಗಳ ಎರಡನೇ ಮಂಗಳವಾರ ಮಹದೇವಪುರ ವಲಯ, ಪ್ರತಿ ತಿಂಗಳ ಎರಡನೇ ಶುಕ್ರವಾರ ಯಲಹಂಕ ವಲಯ, ಪ್ರತಿ ತಿಂಗಳ ಮೂರನೇ ಮಂಗಳವಾರ ದಾಸರಹಳ್ಳಿ ವಲಯ, ಪ್ರತಿ ತಿಂಗಳ ಮೂರನೇ ಶುಕ್ರವಾರ ರಾಜರಾಜೇಶ್ವರಿ ನಗರ ವಲಯ, ಪ್ರತಿ ತಿಂಗಳ ನಾಲ್ಕನೇ ಮಂಗಳವಾರ ಬೊಮ್ಮನಹಳ್ಳಿ ವಲಯ, ಪ್ರತಿ ತಿಂಗಳ ನಾಲ್ಕನೇ ಶುಕ್ರವಾರ ದಕ್ಷಿಣ ವಲಯದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಕಮಿಷನರ್ ಮಹೇಶ್ವರ್ ರಾವ್ ಆಲಿಸಲಿದ್ದಾರೆ.


