ರಶ್ಮಿಕಾ ಮಂದಣ್ಣ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ನಲ್ಲಿ ದೊಡ್ಡ-ದೊಡ್ಡ ನಟರೊಟ್ಟಿಗೆ ರಶ್ಮಿಕಾ ನಟಿಸುತ್ತಿದ್ದಾರೆ. ಇದರ ನಡುವೆ ಮಹತ್ತರ ಗೌರವೊಂದಕ್ಕೆ ರಶ್ಮಿಕಾ ಪಾತ್ರರಾಗಿದ್ದಾರೆ. ಸೈಬರ್ ಭದ್ರತೆಗೆ ರಾಯಭಾರಿ ಆಗಿದ್ದಾರೆ ರಶ್ಮಿಕಾ.
ಕನ್ನಡತಿ, ನಟಿ ರಶ್ಮಿಕಾ ಮಂದಣ್ಣ ಈಗ ಕನ್ನಡ ಚಿತ್ರರಂಗದಿಂದ ದೂರಾಗಿ ಪರಭಾಷೆ ಸಿನಿಮಾಗಲ್ಲಿ ಮಿಂಚುತ್ತಿದ್ದಾರೆ. ಅಪ್ಪಿ-ತಪ್ಪಿಯೂ ಕನ್ನಡ ಸಿನಿಮಾದಲ್ಲಿ ನಟಿಸುವ ಯೋಚನೆಯಲ್ಲಿ ರಶ್ಮಿಕಾ ಮಂದಣ್ಣ ಇಲ್ಲ. ಬಾಲಿವುಡ್ನಲ್ಲಿ ದೊಡ್ಡ ದೊಡ್ಡ ನಟರ ಜೊತೆಗೆ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಇದರ ನಡುವೆ ಮತ್ತೊಂದು ಗೌರವವೊಂದು ರಶ್ಮಿಕಾರನ್ನು ಅರಸಿ ಬಂದಿದೆ. ಈ ಹಿಂದೆ ಡೀಪ್ ಫೇಕ್ ವಿಡಿಯೋನಿಂದ ಸಮಸ್ಯೆ ಎದುರಿಸಿದ್ದ ರಶ್ಮಿಕಾ ಮಂದಣ್ಣ ಈಗ ಭಾರತದ ಸೈಬರ್ ಸೆಕ್ಯುರಿಟಿ ರಾಯಭಾರಿ ಆಗಿ ಆಯ್ಕೆ ಆಗಿದ್ದಾರೆ.
ಕೇಂದ್ರ ಗೃಹ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಐ4ಸಿ (ಇಂಡಿಯನ್ ಸೈಬರ್ಕ್ರೈಂ ಕೋಆರ್ಡಿನೇಷನ್ ಸೆಂಟರ್) ರಶ್ಮಿಕಾ ಮಂದಣ್ಣರನ್ನು ಭಾರತೀಯ ಸೈಬರ್ ಸುರಕ್ಷಾ ಕಾರ್ಯಕ್ರಮದ ರಾಯಭಾರಿಯಾಗಿ ನೇಮಕ ಮಾಡಿದೆ. ರಶ್ಮಿಕಾ ಮಂದಣ್ಣ, ಇನ್ನು ಮುಂದೆ ಅಪಾಯಕಾರಿ ಸೈಬರ್ ಕ್ರೈಂ, ಡೀಪ್ ಫೇಕ್ ವಿಡಿಯೋ, ಆನ್ಲೈನ್ ಫ್ರಾಡ್ ಇನ್ನಿತರೆ ಸೈಬರ್ ಸಂಬಂಧಿ ಅಪರಾಧಗಳ ಕುರಿತಾಗಿ ಸಾಕ್ಷರತೆ, ಜಾಗೃತೆ ಮೂಡಿಸುವ ಕಾರ್ಯವನ್ನು ಮಾಡಲಿದ್ದಾರೆ.
ಈ ಕುರಿತು ಮಾತನಾಡಿರುವ ರಶ್ಮಿಕಾ ಮಂದಣ್ಣ, ‘ಸೈಬರ್ ಅಪರಾಧವು ಅಪಾಯಕಾರಿ ಮತ್ತು ವ್ಯಾಪಕವಾದ ಸಮಸ್ಯೆಯಾಗಿದೆ. ಅದು ಪ್ರಪಂಚದಾದ್ಯಂತ ಇರುವ ವ್ಯಕ್ತಿಗಳು, ವ್ಯವಹಾರಗಳು ಮತ್ತು ಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ. ಸೈಬರ್ ಸಮಸ್ಯೆಯನ್ನು ಅನುಭವಿಸಿರುವ ವ್ಯಕ್ತಿಯಾಗಿ, ಈ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಧನಾತ್ಮಕ ಬದಲಾವಣೆಯನ್ನು ತರಲು ಸೈಬರ್ ಸುರಕ್ಷತೆಯ ಸಂದೇಶವನ್ನು ಪ್ರಚಾರ ಮಾಡಲು ನಾನು ಉತ್ಸುಕಗಳಾಗಿದ್ದೇನೆ. ಈ ಕಾರ್ಯದಲ್ಲಿ ನಾನು ಸಕ್ರಿಯವಾಗಿ ತೊಡಗಿಕೊಳ್ಳಲಿದ್ದೇನೆ. ಈ ಸೈಬರ್ ಬೆದರಿಕೆಗಳನ್ನು ಎದುರಿಸಲು ಮತ್ತು ನಮ್ಮ ಡಿಜಿಟಲ್ ಸ್ಥಳಗಳನ್ನು ರಕ್ಷಿಸಲು ನಾವು ಒಗ್ಗೂಡುವುದು ಬಹಳ ಮುಖ್ಯವಾಗಿದೆ’ ಎಂದಿದ್ದಾರೆ.