ಕಲಬುರಗಿ: ಹಿಜಬ್ ಪರ ಹೋರಾಟಗಾರರ ಬಗ್ಗೆ ಅಷ್ಟೊಂದು ಒಲವು ಹೊಂದಿರುವ ಕಾಂಗ್ರೆಸ್ (Congress) ನಾಯಕರು ಬುರ್ಖಾ ಧರಿಸಿಕೊಂಡು ಓಡಾಡುವುದಾದರೆ ತಾವೇ ಸ್ವತಃ ಬುರ್ಖಾ ಖರೀದಿಸಿ ಕೊಡುವುದಾಗಿ ಬಿಜೆಪಿ (BjP) ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C T Ravi) ಲೇವಡಿ ಮಾಡಿದರು.

ಕಲಬುರಗಿ (kalaburagi) ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಡಿ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ ಎಂಬುದರಿಂದ ಹಿಡಿದು ವಾಲ್ಮೀಕಿ ಹಗರಣದ ಕೋಟ್ಯಂತರ ರೂ. ಅಕ್ರಮವಾಗಿ ಚುನಾವಣೆಗೆ ಬಳಕೆ ಆಗಿದೆ ಅನ್ನೋದು ಈಗಾಗಲೇ ಸಾಬೀತಾಗಿದೆ. ಹಾಗಾಗಿ, ಈ ಬಗ್ಗೆ ರಾಜ್ಯದ ಜನರ ಚಿತ್ತ ಬೇರೆಡೆ ಸೆಳೆಯಲು ಹುಬ್ಬಳ್ಳಿ ಗಲಭೆಕೋರರು ಹಾಗೂ ಹಿಜಾಬ್ ಪರ ಹೋರಾಟಗಾರರ ವಿರುದ್ಧ ಹಾಕಲಾಗಿದ್ದ ಎಲ್ಲ ಪ್ರಕರಣಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಮುಡಾ ಪ್ರಕರಣ (MUDA Scam) ತಮ್ಮ ಕುತ್ತಿಗೆಗೆ ಸುತ್ತಿಕೊಳ್ಳುತ್ತದೆ ಎಂಬುದು ಸಹ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನದಟ್ಟಾಗಿದೆ. ಇದೆಲ್ಲವನ್ನೂ ವಿಷಯಾಂತರ ಮಾಡಲು ಅವರು ಶತಪ್ರಯತ್ನ ಮಾಡುತ್ತಿದ್ದಾರೆ ಎಂದು ನೇರವಾಗಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿ (Hubballi) ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದವರ ಪರವಾಗಿ ತಾವಿರುವುದಾಗಿ ಹೇಳುವ ಸಿಎಂ, ಆಂಜನೇಯಸ್ವಾಮಿಯ ಮೇಲೆ ಕಲ್ಲು ತೂರಾಟ ಮಾಡಿದವರ ಪರವಾಗಿಯೂ ಇದ್ದೇವೆ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ, ಕುಕ್ಕರ್ ಬ್ಲಾಸ್ಟ್ ಮಾಡಿದವರು ತಮ್ಮ ಬ್ರದರ್ಸ್ ಎನ್ನುತ್ತಾರೆ ಎಂದು ಅಚ್ಚರಿ ಹೊರಹಾಕಿದರು.

Leave a Reply

Your email address will not be published. Required fields are marked *

Verified by MonsterInsights