ನಾಗ್ಪುರ: ನೇರ ನುಡಿಗೆ ಹೆಸರಾಗಿರುವ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮತ್ತೊಮ್ಮೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. “ಹಳೆಯ ಪೀಳಿಗೆಯವರು ನಾಯಕತ್ವದ ಜವಾಬ್ದಾರಿಯನ್ನು ಯುವ ಪೀಳಿಗೆಗೆ ಹಸ್ತಾಂತರಿಸಿ ದೂರ ಸರಿಯಬೇಕು” ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ನಾಗ್ಪುರದಲ್ಲಿ ನಡೆದ ‘ಅಡ್ವಾಂಟೇಜ್ ವಿದರ್ಭ-ಖಾಸ್ದಾರ್ ಔದ್ಯೋಗಿಕ ಮಹೋತ್ಸವ’ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾಯಕತ್ವವನ್ನು ನಿಧಾನವಾಗಿ ಯುವ ಪೀಳಿಗೆಗೆ ಹಸ್ತಾಂತರಿಸಬೇಕು. ಕೆಲಸಗಳು ಸುಗಮವಾಗಿ ನಡೆಯಲು ಪ್ರಾರಂಭಿಸಿದ ನಂತರ ಹಿರಿಯರು ತಾವಾಗಿಯೇ ಹಿಂದೆ ಸರಿಯಬೇಕು. ಹೊಸ ಪೀಳಿಗೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಲು ಅವಕಾಶ ನೀಡಿ, ಹಿರಿಯರು ಕೇವಲ ಮಾರ್ಗದರ್ಶನ ಮತ್ತು ಬೆಂಬಲ ನೀಡುವ ಪಾತ್ರಕ್ಕೆ ಸೀಮಿತವಾಗಬೇಕು,” ಎಂದು ಪ್ರತಿಪಾದಿಸಿದರು.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಹಾಗೂ ಕೇಂದ್ರ ಸಚಿವ ಸಂಪುಟ ಪುನಾರಚನೆಯ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿರುವುದು ಕುತೂಹಲ ಮೂಡಿಸಿದೆ. ವಿಶೇಷವಾಗಿ 49 ವರ್ಷದ ನಿತಿನ್ ನಬಿನ್ ಅವರು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಮುನ್ನವೇ ಗಡ್ಕರಿ ಈ ಮಾತುಗಳನ್ನಾಡಿರುವುದು, ಪಕ್ಷದ ಒಳಗಿನ ವಯಸ್ಸಾದ ನಾಯಕರಿಗೆ ನೀಡಿದ ಸೂಚನೆ ಎಂಬಂತೆ ವಿಶ್ಲೇಷಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.


