ಬೆಂಗಳೂರು: ಸಫಾರಿಗೆ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರ ಮಿನಿ ಬಸ್‌ನ ಮೇಲೆ ಚಿರತೆ ಏರಿದ್ದರಿಂದ ಕೆಲವರಿಗೆ ಆತಂಕವಾಗಿದ್ದು, ಕೆಲವರು ಕಿಟಕಿಯಲ್ಲಿ ಚಿರತೆ (Cheetah) ನೋಡಿ ಖುಷಿ ಪಟ್ಟ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನಡೆದಿದೆ.

ಇತ್ತೀಚಿಗೆ ಆರಂಭವಾಗಿರುವ ಚಿರತೆ ಸಫಾರಿಯಲ್ಲಿ (Cheetah Safari) ಚಿರತೆಗಳು ಬಸ್, ಜೀಪ್ ಬಳಿ ಬರುವುದು, ಕೆಲವು ಬಾರಿ ಬಸ್, ಜೀಪ್‌ಗಳ ಮೇಲೆ ಹತ್ತುವ ವಾಡಿಕೆ ಮಾಡಿಕೊಂಡಿವೆ. ಅದೇ ರೀತಿ ಇಂದು ಸಹ ಒಂದು ಚಿರತೆ ಬಸ್ ಮೇಲೆ ಏರಿ ಕಿಟಕಿಗಳಲ್ಲಿ ಪ್ರವಾಸಿಗರನ್ನು ನೋಡಿ ಗುರ್ ಎಂದಿದೆ. ನಂತರ ಚಾಲಕ ಬಸ್ ನಿಧಾನವಾಗಿ ಮುಂದಕ್ಕೆ ಚಲಿಸುತ್ತಿದ್ದಂತೆ ಬಸ್‌ನಿಂದ ಕೆಳಕ್ಕೆ ಹಾರಿ ಹೋಗಿದೆ.

ಕಳೆದ ಮೂರು ತಿಂಗಳ ಹಿಂದೆ ಉದ್ಯಾನವನದ ಕರಡಿ, ಸಿಂಹ ಸಫಾರಿಗಳಿಗೆ ಹೊಂದಿಕೊಂಡಂತೆ ಇರುವ ವಿಶಾಲ ತೆರೆದ ಆವರಣದಲ್ಲಿ 19 ಚಿರತೆಗಳಿಗೆ ಆಶ್ರಯ ನೀಡಿ ಪ್ರತಿ ದಿನ ಒಂದೊಂದು ತಂಡವನ್ನು ಸಫಾರಿಗೆ ಬಿಡಲಾಗುತ್ತಿದೆ. ಸದ್ಯ ಚಿರತೆಗಳನ್ನು ಸಫಾರಿಯಲ್ಲಿ ನೋಡಿ ಖುಷಿ ಪಡುತ್ತಿದ್ದಾರೆ.

ಚಿರತೆಗಳು ಬುದ್ಧಿವಂತ ಪ್ರಾಣಿಗಳು ಚಿಕ್ಕ ಜಾಗ ಸಿಕ್ಕರೂ ನುಸುಳಿ ಬಿಡುತ್ತವೆ ಹಾಗಾಗಿ ಪ್ರವಾಸಿ ವಾಹನದಲ್ಲಿ ಕಿಟಕಿಯ ಗ್ಲಾಸ್‌ಗಳನ್ನು ಮುಚ್ಚಿರಬೇಕು. ಮಕ್ಕಳನ್ನು ಕಿಟಕಿ ಪಕ್ಕ ಕೂರಿಸಿದ್ದರೆ ಎಚ್ಚರಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು. ಅದೇ ರೀತಿ ನಮ್ಮ ವಾಹನಗಳ ಚಾಲಕ ಮತ್ತು ಸಹಾಯಕ ಸಿಬ್ಬಂದಿಗಳಿಗೂ ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಮಾಹಿತಿ ನೀಡಿದ್ದಾರೆ.

ಚಿರತೆಗಳು ನಾಚಿಕೆ ಸ್ವಭಾವದ ಪ್ರಾಣಿ. ಇವುಗಳಿಗೆ ಯಾವುದೇ ಅಪಾಯ ಇಲ್ಲ ಎಂಬುದು ಖಾತರಿ ಪಡಿಸಿಕೊಂಡ ಮೇಲೆಯೇ ನಡೆದು ಸಾಗುವುದು. ಹಾಗಾಗಿ ಪ್ರತಿ ದಿನ ವಾಹನಗಳನ್ನು ನೋಡಿ ಅಪಾಯವಿಲ್ಲ ಎಂಬುದು ಖಚಿತವಾಗಿದ್ದರಿಂದ ವಾಹನಗಳ ಬಳಿ ಬರುವುದು, ಮೇಲೆ ಏರುವುದು ವಾಡಿಕೆ ಮಾಡಿ ಕೊಂಡಿವೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Verified by MonsterInsights