ಹಮಾ: ಇಸ್ಲಾಮಿಕ್ ಬಂಡುಕೋರರು ಹಾಗೂ ಸಿರಿಯಾ ಸರ್ಕಾರದ ವಿರುದ್ಧದ ಅಂತರ್ಯುದ್ಧ ತಾರಕಕ್ಕೇರಿದ್ದು, ಇದರ ಪರಿಣಾಮ ಸಿರಿಯಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಕಳೆದ 13 ವರ್ಷಗಳಿಂದ ಇಸ್ಲಾಮಿಕ್ ಬಂಡುಕೋರರು ಹಾಗೂ ಸಿರಿಯಾ ಸರ್ಕಾರದ ನಡುವೆ ಅಂತರ್ಯುದ್ಧ ನಡೆಯುತ್ತಿದ್ದು, ಕಳೆದ ಕೆಲ ದಿನಗಳಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

ಹಮಾ, ಅಲೆಪ್ಪೊ ನಗರದ ಬಳಿಕ ಇದೀಗ ದಾರಾ ನಗರವೂ ಇಸ್ಲಾಮಿಕ್ ಬಂಡುಕೋರರ ಕೈವಶವಾಗಿದೆ. ದಾರಾ ನಗರದ ಮೇಲೆ ಭಯೋತ್ಪಾದಕ ಸಂಘಟನೆಗಳ ಹಿಂಸಾತ್ಮಕ ಮತ್ತು ಸತತ ದಾಳಿಗಳನ್ನು ಹಿಮ್ಮೆಟ್ಟಿಸುವಲ್ಲಿ ಬಶರ್ ಅಲ್-ಅಸ್ಸಾದ್ ಸರ್ಕಾರದ ಸಶಸ್ತ್ರ ಪಡೆಗಳು ವಿಫಲವಾಗಿವೆ. ಪ್ರಸ್ತುತ ಇಸ್ಲಾಮಿಕ್ ಬಂಡುಕೋರರು ವಶ ಪಡಿಸಿಕೊಂಡಿರುವ ದಾರಾ ನಗರ ಹವ್ರಾನ್ ಪ್ರದೇಶದ ಮುಖ್ಯ ಪಟ್ಟಣವಾಗಿದ್ದು, ಈ ಪ್ರಾಂತ್ಯವು ಜೋರ್ಡಾನ್ ನ ಗಡಿಯಾಗಿದೆ. ಬಂಡುಕೋರರು ದಾರಾ ನಗರದ ಶೇಕಡಾ 90ರಷ್ಟು ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರದ ಸಶಸ್ತ್ರ ಪಡೆಗಳು ಹಿಂದಡಿ ಇಡಬೇಕಾಗಿ ಬಂದಿದೆ.

ಅನಿರೀಕ್ಷಿತ ಬೆಳವಣಿಗೆಯಿಂದ ಆಘಾತಕ್ಕೆ ಒಳಗಾಗಿರುವ ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸ್ಸಾದ್, ರಷ್ಯಾ ಮತ್ತು ಇರಾನ್ ಬೆಂಬಲದೊಂದಿಗೆ ಮತ್ತೆ ಬಂಡಾಯಗಾರರನ್ನು ಹತ್ತಿಕ್ಕುವ ದಿಕ್ಕಿನಲ್ಲಿ ಸಿದ್ಧತೆ ನಡೆಸಿದ್ದಾರೆ. ಒಂದು ಕಡೆ ರಷ್ಯಾ ದೇಶ ಉಕ್ರೇನ್ ಜೊತೆಗೆ ಯುದ್ಧದಲ್ಲಿ ತೊಡಗಿದ್ದರೆ, ಮತ್ತೊಂದು ಕಡೆ ಇರಾನ್ ದೇಶ ಲೆಬನಾನ್ ಮತ್ತು ಗಾಜಾದಲ್ಲಿ ಇಸ್ರೇಲ್ ದಾಳಿಯಿಂದ ತಾನು ಬೆಂಬಲಿಸುತ್ತಿದ್ದ ಹಿಜ್ಬುಲ್ಲಾ ಮತ್ತು ಹಮಾಸ್ ಉಗ್ರಗಾಮಿಗಳ ನಿರ್ನಾಮವನ್ನು ಎದುರಿಸುತ್ತಿದೆ.

ದೇಶ ತೊರೆಯಲು ಭಾರತೀಯರಿಗೆ ಸೂಚನೆ:
ಸಿರಿಯಾದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಈ ಕೂಡಲೇ ಸಿರಿಯಾವನ್ನು ತೊರೆಯುವಂತೆ ಅಲ್ಲಿನ ಭಾರತೀಯರಿಗೆ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ. ಸಿರಿಯಾಗೆ ಅಥವಾ ಸಿರಿಯಾ ಮೂಲಕ ಯಾರೂ ಪ್ರಯಾಣಿಸಬೇಡಿ ಎಂದು ಭಾರತೀಯ ವಿದೇಶಾಂಗ ಇಲಾಖೆ ಎಚ್ಚರಿಕೆ ನೀಡಿದೆ. ಸಿರಿಯಾಲ್ಲಿರುವ ಭಾರತೀಯ ನಾಗರೀಕರು ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ಈ ತಕ್ಷಣವೇ ಹೊರಟು ಬರುವಂತೆ ಭಾರತೀಯ ವಿದೇಶಾಂಗ ಇಲಾಖೆ ಸೂಚಿಸಿದೆ.


