ಬೆಂಗಳೂರು: ಚಲನಚಿತ್ರ ನಿರ್ದೇಶಕ ಗುರುಪ್ರಸಾದ್​ ಅವರ ಆತ್ಮಹತ್ಯೆಯ ಬಳಿಕ, ಅವರ ಹಲವು ಖಾಸಗಿ ಸಂಗತಿಗಳನ್ನು ಮಾಧ್ಯಮಗಳ ಮುಂದೆ ಮಾತನಾಡಿದ್ದ ನಟ ಜಗ್ಗೇಶ್‌ ಅವರ ವಿರುದ್ಧ ಬಿಗ್‌ ಬಾಸ್‌ ಖ್ಯಾತಿಯ ಜಗದೀಶ್‌ ಗರಂ ಆಗಿದ್ದಾರೆ. ಸಾವಿನಲ್ಲೂ ಜಗ್ಗೇಶ್‌ ವಿಕೃತಿ ತೋರಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಜಗದೀಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ತುಂಬ ಆ್ಯಕ್ಟೀವ್. ಬಿಗ್ ಬಾಸ್​ಗೆ ಹೋಗಿ ಬಂದ ಬಳಿಕ ಅವರಿಗೆ ಫ್ಯಾನ್ ಫಾಲೋಯಿಂಗ್ ಜಾಸ್ತಿ ಆಗಿದೆ. ಅನೇಕ ವಿಚಾರಗಳ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಪ್ರತಿಕ್ರಿಯಿಸುತ್ತಾರೆ. ಈಗ ಗುರುಪ್ರಸಾದ್ ಸಾವಿನ ನಂತರ ಜಗ್ಗೇಶ್ ಹೇಳಿದ ಮಾತುಗಳನ್ನು ಜಗದೀಶ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

‘ವಾವ್​ ಜಗ್ಗೇಶ್.. ಸತ್ತ ವ್ಯಕ್ತಿ ಬಗ್ಗೆ ಎಂತಹಾ ವಿಶ್ಲೇಷಕ ಕೃತಿಯನ್ನು ಕೊಟ್ಟೆ. ಸಾವಿನಲ್ಲೂ ವಿಕೃತಿ ಕಾಣಬಹುದಾಗಿದೆ ಎಂಬುದನ್ನು ನಿನ್ನಿಂದ ಕಲಿಯಬೇಕಾಗಿದೆ. ಸಂಸ್ಕೃತಿಯೇ ಅದೇ ರೀತಿ ಇದೆಯೋ ಅಥವಾ ನಿನ್ನ ಮನಸ್ಥಿತಿಯೇ ಅಷ್ಟು ವಿಕೃತವಾಗಿದೆಯೋ ನನಗೆ ಗೊತ್ತಿಲ್ಲ. ಗುರುಪ್ರಸಾದ್​ಗೆ ಕೆರೆತ ಇತ್ತಾ? ಕೀವು, ರಕ್ತ ಬರುತ್ತಿತ್ತಾ? ಎಂಥ ಮನುಷ್ಯ ನೀನು? ಯಾವ ರೀತಿಯಲ್ಲಿ ಮನುಷ್ಯ ಎನ್ನಬೇಕೋ ತಿಳಿಯುತ್ತಿಲ್ಲ’ ಎಂದು ಜಗದೀಶ್ ಹೇಳಿದ್ದಾರೆ.

 

‘ನಿನ್ನನ್ನು ನೀನು ರಾಘವೇಂದ್ರರ ಭಕ್ತ ಅಂತ ಹೇಳ್ತೀಯ. ರಾಘವೇಂದ್ರನ ಭಕ್ತನಾಗಿ, ನಿನಗೆ ಲೈಫ್ ಕೊಟ್ಟ ಡೈರೆಕ್ಟರ್ ಬಗ್ಗೆ ಈ ರೀತಿ ಮಾತಾಡ್ತೀಯ. ‘ಮಠ’ ಸಿನಿಮಾದಲ್ಲಿ ಗುರುಪ್ರಸಾದ್ ನಿನಗೆ ಲೈಫ್ ಕೊಟ್ಟ. ಜಗ್ಗೇಶ್ ಯಾರು ಅಂತ ಇಡೀ ಕರ್ನಾಟಕ ಮರೆತುಹೋಗಿತ್ತು. ಸಾವಿನಲ್ಲೂ ವಿಕೃತಿ ಕಾಣುವಂತಹ ವ್ಯಕ್ತಿ ನೀನು ಎಂಬುದು ನನಗೆ ಗೊತ್ತಿರಲಿಲ್ಲ’ ಎಂದು ಜಗ್ಗೇಶ್​ಗೆ ಜಗದೀಶ್ ಚಾಟಿ ಬೀಸಿದ್ದಾರೆ.

ನೀನು ಮರೆತು ಹೋಗಿದ್ದೀಯ. 25 ವರ್ಷದ ಹಿಂದೆ ಯಾವನಿಗೋ 5 ಲಕ್ಷ ರೂಪಾಯಿ ಕೊಡಬೇಕು ಅಂತ ಹನುಮಂತೇ ಗೌಡರನ್ನು ಕರೆದುಕೊಂಡು ನಮ್ಮ ಆಫೀಸ್​ಗೆ ಬಂದೆ. ಆವತ್ತು ನಾನು ನಿನ್ನ ರೈಟ್​ ಹೇಳು ಅಂದೆ. ನೀನೇನು ರೌಡಿನಾ? ಆವತ್ತೇ ನಿನ್ನ ಯೋಗ್ಯತೆ ಗೊತ್ತಾಯಿತು. ಗುರುಪ್ರಸಾದ್ ಬಗ್ಗೆ ನೀನು ಆಡಿದ ಮಾತು ನನಗಂತೂ ಜೀರ್ಣ ಆಗಿಲ್ಲ. ನಿನ್ನ ಮತ್ತು ಅಶೋಕನ ಡೀಲ್ ನನಗೆ ಚೆನ್ನಾಗಿ ಗೊತ್ತು. ಕಾಲಾಯ ತಸ್ಮೈ ನಮಃ. ಇಂದು ಗುರುಪ್ರಸಾದ್ ಮನೆಯ ಬಾಗಿಲಲ್ಲಿ ಇದ್ದ ಯಮ ನಾಳೆ ಯಾರ ಮನೆಗೆ ಬೇಕಾದರೂ ಬರಬಹುದು. ಕಾದು ನೋಡೋಣ’ ಎಂದು ನಟ ಜಗ್ಗೇಶ್ ವಿರುದ್ಧ ಏಕವಚನದಲ್ಲೇ ಜಗದೀಶ್ ವಾಗ್ದಾಳಿ ನಡೆಸಿದ್ದಾರೆ.

By Veeresh

Leave a Reply

Your email address will not be published. Required fields are marked *

Verified by MonsterInsights