ತುಮಕೂರು : ಇಂದಿನಿಂದ ಎರಡು ದಿನಗಳ ಕಾಲ ತುಮಕೂರಿನ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ತುಮಕೂರು ಅದ್ದೂರಿಯಾಗಿ ಸಿಂಗಾರಗೊಂಡಿದೆ. ವೇದಿಕೆ ವೀಕ್ಷಣೆ ನಡೆಸಿದ ಬಳಿಕ ಗೃಹ ಸಚಿವ ಪರಮೇಶ್ವರ್ ಅವರು ಗಣಪತಿ ಸ್ತೋತ್ರ ಹೇಳಿ ಶುಭ ಹಾರೈಸಿದ್ದು ಸುತ್ತಮುತ್ತ ನೆರೆದವರಲ್ಲಿ ಅಚ್ಚರಿ ಮೂಡಿಸಿತು.
‘ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ..ಎಂದು ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯುತ್ತಿದೆ ಯಾವುದೇ ಅಡ್ಡಿ ಆತಂಕಗಳು ಬರದಿರಲೆಂದು ಗೃಹ ಸಚಿವ ಪರಮೇಶ್ವರ್ ಶ್ಲೋಕ ಹಾಡುವ ಮೂಲಕ ವಿಘ್ನ ನಿವಾರಕನ ನೆನೆದರು.
ಕಳೆದ ವರ್ಷ ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ರಾಜ್ಯದಲ್ಲೂ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದೇ ಸಂದರ್ಭದಲ್ಲಿ ಆ ಘಟನೆ ಸಂಬಂಧ ಕೊರಟಗೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪರಮೇಶ್ವರ ಅವರು, ಹಿಂದೂ ಧರ್ಮ ಹುಟ್ಟಿದ್ದು ಯಾವಾಗ, ಯಾರು ಹುಟ್ಟಿಸಿದರು ಎಂದು ಪ್ರಶ್ನಿಸಿದ್ದರು. ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರೆ ಇತ್ತ ಕಾಂಗ್ರೆಸ್ ನಾಯಕರು ಸಹ ಈ ವಿಚಾರದಲ್ಲಿ ಅಂತರ ಕಾಯ್ದುಕೊಂಡಿದ್ದರೂ ಆದರೆ ಪರಮೇಶ್ವರ್ ಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟಿಸಿದರು ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಸ್ಟಾಲಿನ್ ಹೇಳಿಕೆಗೆ ಬೆಂಬಲ ಸೂಚಿಸಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದರು.