ಕೇರಳದ ದೇವಸ್ಥಾನದಲ್ಲಿ ಕುಂಭಮೇಳ ಸುಂದರಿ ಮೊನಾಲಿಸಾ ವಿವಾಹ!

ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಿ ರಾತ್ರೋರಾತ್ರಿ ಸೆನ್ಸೇಷನ್ ಸೃಷ್ಟಿಸಿದ್ದ ಮೊನಾಲಿಸಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ದೀರ್ಘಕಾಲದ ಮುಸ್ಲಿಂ ಪ್ರೇಮಿ ಫರ್ಮನ್ ಖಾನ್ ಜೊತೆ ಕೇರಳದ ಅರುಮನೂರು ದೇವಸ್ಥಾನದಲ್ಲಿ ಮೋನಾಲಿಸಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿವಾಹ ಮಹೋತ್ಸವಕ್ಕೆ ಕೇರಳದ ಪ್ರಮುಖ ರಾಜಕೀಯ ನಾಯಕರು ಸಾಕ್ಷಿಯಾದರು. ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ, ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ. ವಿ. ಗೋವಿಂದನ್ ಮತ್ತು ಸಂಸದ ಎ. ಎ. ರಹೀಮ್ ಅವರು ಭಾಗವಹಿಸಿ ನವಜೋಡಿಗೆ ಹಾರೈಸಿದರು. ಮದುವೆಯ ಸಂಭ್ರಮದಲ್ಲಿ ಮೋನಾಲಿಸಾ ಕೆಂಪು ಬಣ್ಣದ ಸೀರೆಯುಟ್ಟು, ಹಣೆಗೆ ಸಿಂಧೂರವಿಟ್ಟು ಮಿಂಚುತ್ತಿದ್ದರು. ವರ ಫರ್ಮನ್ ಖಾನ್ ಕೇರಳದ ಸಾಂಪ್ರದಾಯಿಕ ಉಡುಗೆ ಧರಿಸಿದ್ದರು.

ಮಧ್ಯಪ್ರದೇಶದ ಇಂದೋರ್ ಮೂಲದ ಮೋನಾಲಿಸಾ ಮತ್ತು ಮಹಾರಾಷ್ಟ್ರದ ಫರ್ಮನ್ ಕಳೆದ ಒಂದೂವರೆ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಭಿನ್ನ ಧರ್ಮದ ಪ್ರೇಮಕ್ಕೆ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕುಟುಂಬದ ವಿರೋಧದಿಂದಾಗಿ ಪ್ರೇಮಿಗಳಿಬ್ಬರೂ ಕೇರಳಕ್ಕೆ ಬಂದು ತಿರುವನಂತಪುರಂನ ತಂಪನೂರು ಪೊಲೀಸ್ ಠಾಣೆಯಲ್ಲಿ ರಕ್ಷಣೆ ಕೋರಿದ್ದರು. ಮೋನಾಲಿಸಾ ತಂದೆ ಕೇರಳಕ್ಕೆ ಬಂದು ಮಗಳನ್ನು ಮನೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ಆದ್ರೆ ಅವರು ಹೋಗಲು ನಿರಾಕರಿಸಿದರು.
ಮಹಾಕುಂಭ ಮೇಳದಲ್ಲಿ ಮಾಲೆ ಮಾರುತ್ತಿದ್ದ ಮೋನಾಲಿಸಾ ಅವರ ಒಂದು ಫೋಟೋ ವೈರಲ್ ಆಗಿತ್ತು. ಅದಾದ ನಂತರ ಅವರಿಗೆ ಸಿನಿಮಾ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಅವಕಾಶಗಳು ಹುಡುಕಿಕೊಂಡು ಬಂದವು. ಹಲವಾರು ದೊಡ್ಡ ಬ್ರ್ಯಾಂಡ್‌ಗಳಿಗೆ ಜಾಹೀರಾತು ಮತ್ತು ಮ್ಯೂಸಿಕ್ ವಿಡಿಯೋಗಳಲ್ಲಿ ಅವರು ನಟಿಸಿದ್ದಾರೆ. ಮೋನಾಲಿಸಾ ಪ್ರಸ್ತುತ ‘ದಿ ಡೈರಿ ಆಫ್ ಮಣಿಪುರಂ’ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಗಮನ ಸೆಳೆದಿದೆ. ಜೊತೆಗೆ ಮಲಯಾಳಂನ ‘ನಗಮ್ಮ’ ಎಂಬ ಚಿತ್ರದಲ್ಲೂ ಅವರು ನಟಿಸುತ್ತಿದ್ದು, ಪ್ರಸ್ತುತ ಕೇರಳದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಒಟ್ಟಾರೆ, ಮಹಾಕುಂಭ ಮೇಳದಲ್ಲಿ ಸಾಮಾನ್ಯವಾಗಿ ಮಾಲೆಗಳನ್ನು ಮಾರಾಟ ಮಾಡುತ್ತಿದ್ದ ಮೊನಾಲಿಸಾ, ಸಾಮಾಜಿಕ ಮಾಧ್ಯಮದ ಮೂಲಕ ದೇಶವ್ಯಾಪಿ ಖ್ಯಾತಿ ಪಡೆದಿದ್ದು, ಇದೀಗ ಮದುವೆ ಮತ್ತು ಸಿನಿಮಾ ಅವಕಾಶಗಳ ಕಾರಣದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ಜೀವನದಲ್ಲಿ ನಡೆದ ಈ ಅಚ್ಚರಿಯ ಬದಲಾವಣೆ ಇದೀಗ ಸಾರ್ವಜನಿಕರ ಗಮನ ಸೆಳೆಯುತ್ತಿದೆ.




