Tuesday, January 27, 2026
24 C
Bengaluru
Google search engine
LIVE
ಮನೆ#Exclusive NewsTop Newsವೈಟ್ನರ್ ಉಜ್ಜಿ ಕಪ್ಪುಚುಕ್ಕೆ ತೆಗೆಯುವ ಪ್ರಯತ್ನ ಮಾಡಿದ್ದೇಕೆ?-ಹೆಚ್.ಡಿ.ಕುಮಾರಸ್ವಾಮಿ

ವೈಟ್ನರ್ ಉಜ್ಜಿ ಕಪ್ಪುಚುಕ್ಕೆ ತೆಗೆಯುವ ಪ್ರಯತ್ನ ಮಾಡಿದ್ದೇಕೆ?-ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ನನ್ನ ಮೇಲೆ ಒಂದೇ ಒಂದು ಕಪ್ಪುಚುಕ್ಕೆ ಇಲ್ಲವೆನ್ನುವ ನೀವು, ವೈಟ್ನರ್ ಉಜ್ಜಿ ಕಪ್ಪುಚುಕ್ಕೆ ತೆಗೆಯುವ ವ್ಯರ್ಥ ಪ್ರಯತ್ನ ಮಾಡಿದ್ದೇಕೆ? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ನೇರ ಪ್ರಶ್ನೆ ಹಾಕಿದ್ದಾರೆ.

ತಮ್ಮ ಬಗ್ಗೆ ಎಕ್ಸ್ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟಿರುವ ಸಚಿವರು. ಕಳ್ಳನ ಜಾಗದಲ್ಲಿ ನಿಂತು ಊರಿಗೆಲ್ಲ ಗೀತೆ ಬೋಧಿಸುತ್ತಿದ್ದೀರಿ ಎಂದು ಲೇವಡಿ ಮಾಡಿದರು.

ನಿಮ್ಮ ವಿರುದ್ಧ ಬಂದ ಮೂಡಾ ಕೊಚ್ಚೆಯ ಗಮನ ಬೇರೆಡೆಗೆ ಸೆಳೆಯುವ ನಿಮ್ಮ ಹುನ್ನಾರ ನನಗೆ ಅರ್ಥವಾಗುತ್ತದೆ. ಹೇಗಾದರೂ ಅಧಿಕಾರದಲ್ಲೇ ಉಳಿದು ಲೂಟಿ ಹೊಡೆಯಬೇಕೆನ್ನುವ ನಿಮ್ಮ ಧನದಾಹದ ಹಪಾಹಪಿಯನ್ನೂ ಅರ್ಥ ಮಾಡಿಕೊಳ್ಳಬಲ್ಲೆ. ಕಳ್ಳನ ಜಾಗದಲ್ಲಿ ನಿಂತು ಊರಿಗೆಲ್ಲ ಗೀತೆ ಬೋಧಿಸುವ ನಿಮ್ಮ ಪ್ರಾರಬ್ಧ ಎಂಥಾ ಕೀಳುಮಟ್ಟಕ್ಕೆ ಇಳಿದಿದೆ ಎನ್ನುವುದನ್ನೂ ಅರ್ಥ ಮಾಡಿಕೊಂಡಿದ್ದೇನೆ. ಎಷ್ಟೇ ಆದರೂ ನೀವು ಸಕಲ ಕಲೆಗಳ ಸಿದ್ದಕರ್ಮಿ, ಇಂಥ ಗಲೀಜು ಕೆಲಸ ನಿಮಗೆ ಬೆಣ್ಣೆಯಿಂದ ಬಂದ ವಿದ್ಯೆ! ಎಂದು ಸಚಿವರು ಕಿಡಿಕಾರಿದ್ದಾರೆ.

ಸಾಯಿ ವೆಂಕಟೇಶ್ವರಕ್ಕೆ 550 ಎಕರೆ ಮಂಜೂರು ಮಾಡಿದ್ದೇನೆ ಎಂದು ಬೊಗಳೆ ಬಿಟ್ಟಿದ್ದೀರಿ. ನನ್ನ ಬರವಣಿಗೆ ಪೋರ್ಜರಿ ಆಗಿದೆ. ಪತ್ರಿಕೆಗಳ ವರದಿಗೆ ನಾನು ಉತ್ತರ ಕೊಡುತ್ತೇನೆ, ಪಲಾಯನ ನನ್ನ ಜಾಯಮಾನವಲ್ಲ. ಆದರೆ, ಆ ವರದಿಯನ್ನೇ ನೆತ್ತಿ ಮೇಲಿಟ್ಟುಕೊಂಡು ಉಪ್ಪಿನಕಾಯಿ ಚಪ್ಪರಿಸುವ ದೈನೇಸಿ ಸ್ಥಿತಿ ನಿಮಗೇಕೆ? 40 ವರ್ಷಗಳ ರಾಜಕೀಯ ಜೀವನದಲ್ಲಿ ನನ್ನ ಮೇಲೆ ಒಂದೇ ಒಂದು ಕಪ್ಪುಚುಕ್ಕೆ ಇಲ್ಲವೆನ್ನುವ ನೀವು, ವೈಟ್ನರ್ ಉಜ್ಜಿ ಕಪ್ಪುಚುಕ್ಕೆ ತೆಗೆಯುವ ವ್ಯರ್ಥ ಪ್ರಯತ್ನ ಮಾಡಿದ್ದೇಕೆ? ಎಂದಿರುವ ಸಚಿವರು Kappu chukke removed from whitener!! ಎಂದು ಕುಟುಕಿದ್ದಾರೆ.

ಮೂಡದಲ್ಲಿ ನೀವು, ನಿಮ್ಮ ಸಕುಟುಂಬ ಪರಿವಾರ ಸರಕಾರಿ ಭೂಮಿಯನ್ನು ಹೇಗೆಲ್ಲಾ ಮುಕ್ಕಿತು ಎನ್ನುವುದಕ್ಕೆ ದಂಡಿದಂಡಿ ದಾಖಲೆಗಳೇ ಇವೆ. ನಿಮ್ಮ ಪಟಾಲಂ ಹೆಲಿಕಾಪ್ಟರ್ ನಲ್ಲಿ ಕದ್ದು ಸಾಗಿಸಿದ ದಾಖಲೆಗಳು ಸುಳ್ಳಾ? ಕಪ್ಪುಚುಕ್ಕೆಯನ್ನು ನಿಮ್ಮ ವೈಟ್ನರ್ ಅಳಿಸೀತಾ ಸಿದ್ದರಾಮಯ್ಯನವರೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ನನ್ನ ಸಹಿ ಇಲ್ಲ, ಟಿಪ್ಪಣಿಯೂ ಇಲ್ಲ ಅಂತೀರಿ. ಅಪ್ಪಣೆಯನ್ನಷ್ಟೇ ಕೊಟ್ಟಿದ್ದೀರಿ! 14 ಸೈಟಿಗೆ ₹62 ಕೋಟಿ ಪರಿಹಾರ ಕೇಳಲು ಹೇಳಿದ್ದು ಯಾವ ಟಿಪ್ಪಣಿ? ನಿಮ್ಮದು ನಾಲಿಗೆಯೋ.. ಇನ್ನೇನೋ.. ಆಚಾರವಿಲ್ಲದ ನಾಲಿಗೆ ನನ್ನ ತಟ್ಟೆಯತ್ತ ಚಾಚಿದೆ ಸತ್ತ ಜೀವದ ರುಚಿ ನೆಕ್ಕಲು.. ಎಂದು ಟೆಕಿಸಿರುವ ಅವರು, ಸಿದ್ದರಾಮಯ್ಯನವರೇ.. ನಾನು ಕಾನೂನು ಪಂಡಿತ, ವಕೀಲ ಎನ್ನುತ್ತೀರಿ. 2011ರಲ್ಲಿ ಸುಪ್ರೀಂ ಕೋರ್ಟ್ SITಗೆ ಕೊಟ್ಟ ಆದೇಶವೇನು ಎಂದು ನಿಮಗೆ ಗೊತ್ತಿಲ್ಲವೇ? ನಾನು ವಕೀಲ.. ನಾನು ವಕೀಲ.. ಎಂದು ಪದೇ ಪದೆ ಹೇಳಬೇಡಿ ಎಂದು ಹಿಂದೆಯೇ ಸಲಹೆ ಮಾಡಿದ್ದೆ. ಬುದ್ಧಿಗೇಡಿಗಳಿಗೆ ಬುದ್ಧಿವಾದ ರುಚಿಸದು ಎಂದು ಹೇಳಿದ್ದಾರೆ.

ರಾಜ್ಯಪಾಲರಿಗೆ SIT ಬರೆದ ಪತ್ರ ಇಟ್ಟುಕೊಂಡು ಹಾರಾಟ ಮಾಡುತ್ತಿದ್ದೀರಿ ನೀವು. ಪತಂಗದ ಹಾರಾಟ ನೋಡಲಿಕ್ಕೆ ಚೆಂದ, ಕೆಳಗಿರುವ ಬೆಂಕಿಜ್ವಾಲೆ ಅದಕ್ಕೆ ಅರಿವಿರುವುದಿಲ್ಲ. ನಿಮ್ಮ ಬಗ್ಗೆ ನನಗೆ ಕನಿಕರವಿದೆ. ನಿಮ್ಮ ಆನಂದ ತಾತ್ಕಾಲಿಕ ಸಿದ್ದರಾಮಯ್ಯನವರೇ.. ಎಂದು ಕೇಂದ್ರ ಸಚಿವರು ಪ್ರಶ್ನೆ ಮಾಡಿದ್ದಾರೆ.

ಸುತ್ತಲೂ ಪಟಾಲಂ ಕಟ್ಟಿಕೊಂಡು, ಹೈಕಮಾಂಡ್ ಅನ್ನೇ ಕಾಲಕಸ ಮಾಡಿಕೊಂಡು, ನಂಬಿ ಕೈಹಿಡಿದವರ ಬೆನ್ನಿಗೆ ಚೂರಿ ಹಾಕಿ ಕುರ್ಚಿಗಾಗಿ ಪಾಲಿಟಿಕ್ಸ್ ಮಾಡುವ ನಿಮ್ಮ ದಿಕ್ಕೆಟ್ಟ ದುಸ್ಥಿತಿ ನನಗಿಲ್ಲ ಸಿದ್ದರಾಮಯ್ಯನವರೇ..
ನನ್ನ ರಾಜಕಾರಣ ನಿಮ್ಮಂತೆಯೇ ಹಣಕ್ಕೆ, ಅಧಿಕಾರಕ್ಕೆ ಅಲ್ಲ. ಅಧಿಕಾರ ಇದ್ದರೂ, ಇಲ್ಲದಿದ್ದರೂ ನಾನು ನಾನೇ… ‘ಸೋತರೆ ಸೋಲಬೇಕು ಬಾಹುಬಲಿಯಂತೆ..’ ಆ ಮಹಾನ್ ವಿರಾಗಿಯೇ ನನ್ನ ಆದರ್ಶ. 20 ತಿಂಗಳ ಅಧಿಕಾರ,14 ತಿಂಗಳ ಸರಕಾರ ತ್ಯಜಿಸುವಾಗಲೂ ನಾನು ನಿರ್ಭಾವುಕ. ಇದು ನಿಮಗೆ ಸಾಧ್ಯವೇ? ಎಂದು ಕುಮಾರಸ್ವಾಮಿ ಅವರು ಕೇಳಿದ್ದಾರೆ.

ಪ್ರಧಾನಮಂತ್ರಿಗಳ ರಕ್ಷಣೆ ಪಡೆದುಕೊಳ್ಳುವ, ಅವರ ಗೌರವಕ್ಕೆ ಧಕ್ಕೆ ತರುವ ಕೆಲಸ ನಾನೆಂದೂ ಮಾಡಲಾರೆ. ನನ್ನನ್ನು ನಾನು ರಕ್ಷಣೆ ಮಾಡಿಕೊಳ್ಳುವುದೂ ಗೊತ್ತು. ನಿಮ್ಮ ದುಷ್ಟತನದ ಭಕ್ಷಣೆಯೂ ಗೊತ್ತು. ನನ್ನ ಪುರಾಣ ಕಂತುಗಳಲ್ಲಿ ಬರುತ್ತದೆ ಎನ್ನುವ ಸಿದ್ದರಾಮಯ್ಯನವರೇ.. ನಿಮ್ಮ ಹೆಣೆಬರಹ ನಿರ್ಧರಿಸುವ ನೂರಾರು ಪುರಾಣಗಳು ನನ್ನಲ್ಲಿವೆ. ಸಾವಿರಾರು ಚಾಪ್ಟರುಗಳ ಪ್ಯಾನ್ ಇಂಡಿಯಾ ಸಿನಿಮಾವನ್ನೇ ಮಾಡಬಹುದು ಎಂದು ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದ್ದಾರೆ ಕುಮಾರಸ್ವಾಮಿ ಅವರು.

ಬೇಲಿಕೇರಿಯಲ್ಲಿ ಅದಿರು ಕದ್ದ ಅಸಾಮಿಗಳ ಜತೆ ನಿಮ್ಮ ‘ಸಿದ್ಧಹಸ್ತ’ ಶಾಮೀಲಾಗಿರುವ ಗಣಿಪುರಾಣ ಬಿಚ್ಚಿದರೆ ನಿಮ್ಮ ಮನೆಯ ಮುಂದೆ ಕಾನ್ಸ್ ಟೇಬಲ್ ಗಳು ಸಾಲುಗಟ್ಟಬೇಕಾಗುತ್ತದೆ ಅವರು ಎಚ್ಚರಿಕೆ ನೀಡಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments