Tuesday, January 27, 2026
20.2 C
Bengaluru
Google search engine
LIVE
ಮನೆರಾಜಕೀಯಕುಮಾರಸ್ವಾಮಿ ಅವರಿಗೆ 66ನೇ ಹುಟ್ಟುಹಬ್ಬದ ಸಂಭ್ರಮ: ಪ್ರಧಾನಿ ಮೋದಿ ಸೇರಿದಂತೆ ಶುಭ ಕೋರಿದ ಗಣ್ಯರು

ಕುಮಾರಸ್ವಾಮಿ ಅವರಿಗೆ 66ನೇ ಹುಟ್ಟುಹಬ್ಬದ ಸಂಭ್ರಮ: ಪ್ರಧಾನಿ ಮೋದಿ ಸೇರಿದಂತೆ ಶುಭ ಕೋರಿದ ಗಣ್ಯರು

ಬೆಂಗಳೂರು: ಜೆಡಿಎಸ್​ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಮತ್ತು ಕೇಂದ್ರ ಸಚಿವ ಹೆಚ್​​.ಡಿ ಕುಮಾರಸ್ವಾಮಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹೆಚ್​​.ಡಿ ಕುಮಾರಸ್ವಾಮಿ ಅವರು 66ನೇ ವಂಸತಕ್ಕೆ ಕಾಲಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಗಣ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಶುಭ ಹಾರೈಸಿದ್ದಾರೆ.

HDK ಹುಟ್ಟುಬ್ಬಕ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಉಕ್ಕು ಮತ್ತು ಭಾರೀ ಕೈಗಾರಿಕೆಗಳಲ್ಲಿ ತಮ್ಮ ಕೆಲಸದ ಮೂಲಕ ಆತ್ಮನಿರ್ಭರತೆಯತ್ತ ನಮ್ಮ ಪ್ರಯತ್ನಗಳನ್ನು ಬಲಪಡಿಸುತ್ತಿದ್ದೀರ. ಸಮಾಜ ಸೇವೆಯಲ್ಲಿ ನಿಮಗೆ ದೀರ್ಘ ಮತ್ತು ಆರೋಗ್ಯಕರ ಜೀವನ ಸಿಗಲಿ ಎಂದು ಹಾರೈಸಿದ್ದಾರೆ. ಮೋದಿಯ ಹಾರೈಕೆಗೆ ಭಾವುಕಾರ ಕುಮಾರಸ್ವಾಮಿ, ಪ್ರಧಾನಿಯವರ ಶುಭಾಶೀರ್ವಾದದಿಂದ ನಾನು ಭಾವುಕನಾಗಿದ್ದೇನೆ . ಅವರ ಪಿತೃವಾತ್ಸಲ್ಯಕ್ಕೆ ನಾನು ಧನ್ಯನಾಗಿದ್ದೇನೆ. ಮಾನ್ಯ ಪ್ರಧಾನಿಗಳ ಚಿಂತನಶೀಲ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ನನ್ನ ಮೇಲಿನ ನಂಬಿಕೆಗೆ ನಾನು ಚಿರಋಣಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪ್ರಧಾನಮಂತ್ರಿಗಳ ಶುಭಾಶೀರ್ವಾದ ಮತ್ತು ಸಂದೇಶವು ಸಾರ್ವಜನಿಕ ಸೇವೆಯು ಕೇವಲ ಒಂದು ಜವಾಬ್ದಾರಿಯಲ್ಲ, ಬದಲಿಗೆ ರಾಷ್ಟ್ರ, ಸಮಾಜ ಮತ್ತು ಸಾರ್ವಜನಿಕರ ಕಲ್ಯಾಣಕ್ಕಾಗಿ ಜೀವಮಾನದ ಅನನ್ಯ ಸಮರ್ಪಣೆಯಾಗಿದೆ ಎಂಬುದನ್ನು ನೆನಪಿಸುತ್ತದೆ. ಸಮರ್ಪಣೆ, ಪರಿಶ್ರಮ ಮತ್ತು ನಿಸ್ವಾರ್ಥ ಸೇವೆಯ ಬಗ್ಗೆ ಅವರ ಮೆಚ್ಚುಗೆಯು ನನ್ನನ್ನು ಮತ್ತಷ್ಟು ಉತ್ತೇಜಿಸಿದೆ ಹಾಗೂ ರಾಷ್ಟ್ರಸೇವೆಗೆ ಸಮರ್ಪಿಸಿಕೊಳ್ಳಲು ಪ್ರೇರೇಪಣೆ ನೀಡಿದೆ. ನನ್ನನ್ನು ಹರಸಿ ಆಶೀರ್ವದಿಸಿದ ಮಾನ್ಯ ಪ್ರಧಾನಿಗಳಿಗೆ ಕೃತಜ್ಞನಾಗಿದ್ದೇನೆ. ನನ್ನ ಮೇಲೆ ಅವರು ಇರಿಸಿರುವ ನಂಬಿಕೆಗೆ ನಾನು ಋಣಿಯಾಗಿದ್ದೇನೆ” ಎಂದು ಹೆಚ್​ಡಿಕೆ ಭಾವುಕವಾಗಿ ಬರೆದುಕೊಂಡಿದ್ದಾರೆ.

ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು. ಇನ್ನೂ ಹೆಚ್ಚಿನ ಜನಸೇವೆ ಮಾಡಲು ದೇವರು ಅವರಿಗೆ ಉತ್ತಮ ಆರೋಗ್ಯ ಕರುಣಿಸಲಿ ಎಂದು ಹಾರೈಸುತ್ತೇನೆ’ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ತಿಳಿಸಿದ್ದಾರೆ.

ಇನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರು ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಆಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಜನ್ಮದಿನದ ಹೃತ್ತೂರ್ವಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯದೊಂದಿಗೆ, ಇನ್ನೂ ಸುದೀರ್ಘಕಾಲ ದೇಶಸೇವೆ ನಡೆಸುವ ಶಕ್ತಿಯನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

1959ರ ಡಿಸೆಂಬರ್ 16ರಂದು ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಜನಿಸಿದ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಪುತ್ರ. ಕರ್ನಾಟಕದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಅವರು, ಜೆಡಿಎಸ್ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರು. ಪ್ರಸ್ತುತ ಕೇಂದ್ರದಲ್ಲಿ ಬೃಹತ್​ ಕೈಗಾರಿಕೆಗಳು ಮತ್ತು ಉಕ್ಕು ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆತ್ಮನಿರ್ಭರ ಭಾರತದಲ್ಲಿ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಅಭಿವೃದ್ಧಿಗೆ ಅವರ ಕೊಡುಗೆಗಳನ್ನು ಪ್ರಧಾನಿ ಮೋದಿ ಮೆಚ್ಚಿಕೊಂಡಿದ್ದಾರೆ.

ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಸರಳವಾಗಿ ಆಚರಣೆ ಮಾಡುತ್ತಿದ್ದು, ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯ ಕೋರುತ್ತಿದ್ದಾರೆ. ಜೆಡಿಎಸ್ ಪಕ್ಷದ ಮೂಲ ತತ್ವವಾದ ಸಾರ್ವಜನಿಕ ಸೇವೆಯನ್ನು ಒತ್ತಿಹೇಳುತ್ತಾ, ಸಮಾಜದ ಅಗತ್ಯವಿರುವವರಿಗೆ ಸಹಾಯ ಮಾಡುವುದೇ ತಮಗೆ ಸಿಗುವ ಉತ್ತಮ ಉಡುಗೊರೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments