ಬೆಂಗಳೂರು: ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಯತ್ನಾಳ್ ಮತ್ತು ಡಿವಿಎಸ್ ಹೇಳಿಕೆಯ ವಿಚಾರಗಳೇ ಸಾಕಷ್ಟು ಸದ್ದು ಮಾಡಿವೆ. ಇನ್ನು ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳೆಲ್ಲವೂ ಬೋಗಸ್..ವೋಟ್ ಪಾಲಿಟಿಕ್ಸ್ ಮಾಡ್ತಾ ಇದ್ದಾರೆ ಎಂಬ ಆರೋಪವನ್ನ ಬಿಜೆಪಿ ನಾಯಕರು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಏನೇ ಭರವಸೆ ಕೊಟ್ರು ಅದು ಲೋಕಸಭೆ ಚುನಾವಣೆ ಗಿಮಿಕ್ ಅಂತ ಬಿಜೆಪಿಗರು ಕಿಡಿಕಾರಿದ್ದಾರೆ.
ಬಿಜೆಪಿ ಪದಾಧಿಕಾರಿಗಳ ಸಭೆ ಬಳಿಕ ಮಾತನಾಡಿದ ಕೋಟಾ ಶ್ರೀನಿವಾಸ್ ಪೂಜಾರಿ ಯುವನಿಧಿ ಯೋಜನೆ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದ ಯುವಕರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಡಿಗ್ರಿ ಪಾಸಾದವರಿಗೆ ಹಣ ಕೊಡ್ತೀವಿ ಅಂತ ಹೇಳಿದ್ರು. ಆದ್ರೆ ಹಣ ಬಿಡುಗಡೆ ಮಾಡೋದಿಕ್ಕೆ ಮೀನಾಮೇಷ ಏಣಿಸಿದ್ದಾರೆ. ಇದೀಗ ಬಿಜೆಪಿ ಟೀಕಿಸಿದ ಬಳಿಕ ಯುವನಿಧಿ ಬಿಡುಗಡೆ ಮಾಡಿದ್ದಾರೆ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.
ಇನ್ನು ಗೃಹಲಕ್ಷ್ಮಿ ಯೋಜನೆ ಕುರಿತು ಮಾತನಾಡಿದ ಶ್ರೀನಿವಾಸ್ ಪೂಜಾರಿ ಎಷ್ಟೋ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ಹಣವೇ ತಲುಪಿಲ್ಲ, ಮೂರು ಜನರಿಗೆ ಹಣ ಬಿಡುಗಡೆ ಮಾಡಿ ಮೂವತ್ತು ಅಂತಿದ್ದಾರೆ. ಇನ್ನು ಶಕ್ತಿ ಯೋಜನೆ ಕಥೆಯೂ ಅಷ್ಟೆ.. ಫ್ರೀ ಬಸ್ ಬಿಟ್ರು.. ಎಷ್ಟೋ ಕಡೆ ಸರ್ಕಾರಿ ಬಸ್ಸುಗಳೇ ಬರ್ತಿಲ್ಲ..ಫ್ರೀ ತಗೊಂಡು ಜನ ಏನ್ ಮಾಡ್ತಾರೆ ಹೇಳಿ..ಬಸ್ ಇಲ್ಲದೇ ವಿದ್ಯಾರ್ಥಿಗಳು ಪ್ರತಿಭಟನೆ ಮಾಡ್ತಾ ಇದ್ದಾರೆ. ಕಾಂಗ್ರೆಸ್ ಸರ್ಕಾರದ ಐದೂ ಗ್ಯಾರಂಟಿಗಳು ವಿಫಲವಾಗಿವೆ ಎಂದು ಗರಂ ಆಗಿಯೇ ಕಾಂಗ್ರೆಸ್ ವಿರುದ್ಧ ಗುಡುಗಿದ್ರು.
ಇನ್ನು ಕರವೇ ಹೋರಾಟ ಕುರಿತು ಮಾತನಾಡಿದ ಶ್ರೀನಿವಾಸ್ ಪೂಜಾರಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ..ಕನ್ನಡವೇ ಅಂತಿಮ. ಹೀಗಾಗಿ ಹೋರಾಟ ಮಾಡೋದ್ರಲ್ಲಿ ತಪ್ಪಿಲ್ಲ. ಆದ್ರೆ ಯಾವುದೇ ಹಿಂಸಾತ್ಮಕ ಕೃತ್ಯಗಳಿಗೆ ಅವಕಾಶ ಕೊಡಬಾರದು ಅಂತ ತಿಳಿಸಿದ್ರು.
ಇನ್ನು ಪ್ರಮುಖವಾಗಿ ಯತ್ನಾಳ್ ಹಾಗೂ ಡಿವಿ ಸದಾನಂದಗೌಡರ ಹೇಳಿಕೆ ವಿಚಾರವಾಗಿಯೂ ಮಾತನಾಡಿದ ಶ್ರೀನಿವಾಸ್ ಪೂಜಾರಿ ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ. ಅವರ ಹೇಳಿಕೆ ಕುರಿತಂತೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ, ಈ ಕುರಿತು ರಾಜ್ಯಾಧ್ಯಕ್ಷರು ಕೂಡ ಕ್ರಮ ಕೈಗೊಂಡು ಹೈಕಮಾಂಡ್ ಗಮನಕ್ಕೆ ತರ್ತಾರೆ ಅಂತ ಅಡ್ಡಗೋಡೆ ಮೇಲೆ ದೀಪ ಇಟ್ಟು ಸೈಲೆಂಟಾಗಿ ಜಾರಿಕೊಂಡ್ರು.