ಬಿಜೆಪಿಯಲ್ಲಿ ಹಲವು ಹಾಲಿ ಸಂಸದರಿಗೆ ಟಿಕೆಟ್ ಮಿಸ್.? ಕೊಪ್ಪಳದ ಸಂಗಣ್ಣ ಕರಡಿಗೂ ಟಿಕೆಟ್ ಗೆ ಕೊಕ್ ಸಾಧ್ಯತೆ ಇಡೀ ದೇಶದಲ್ಲೀಗ ಲೋಕಸಭಾ ಎಲೆಕ್ಷನ್ ಫೀವರ್ ಜೋರಾಗ್ತಿದೆ. ರಾಜ್ಯದಲ್ಲಿ ಈಗಾಗ್ಲೇ ಎಲ್ಲಾ ಪಕ್ಷಗಳಲ್ಲಿ ಟಿಕೆಟ್ ಲಾಬಿ, ಟಿಕೆಟ್ ಫೈಟ್ ನಡೀತಿದೆ. ಅದ್ರಲ್ಲೂ ಬಿಜೆಪಿಯ 25 ಸಂಸದರಲ್ಲಿ 12 ರಿಂದ 13 ಸಂಸದರಿಗೆ ಟಿಕೆಟ್ ಮಿಸ್ ಆಗುತ್ತೆ ಅನ್ನೋ ಸುದ್ದಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈಗಾಗ್ಲೇ ಮಾಜಿ ಸಿಎಂ ಸದಾನಂದಗೌಡರ ಸೇರಿ ಹಲವರು ರಿಯಾಕ್ಟ್ ಕೂಡ ಮಾಡಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತ ಕೊಪ್ಪಳದ ಸಂಸದ ಸಂಗಣ್ಣ ಕರಡಿಗೂ ಈ ಬಾರಿ ಬಿಜೆಪಿ, ಲೋಕಸಭೆಗೆ ಟಿಕೆಟ್ ಕೊಡಲ್ವಂತೆ ಅನ್ನೋ ಚರ್ಚೆ ಆಗ್ತಿದೆ. ವಯಸ್ಸಿನ ವಿಚಾರ ಹಾಗೂ ಮೋದಿ ಬಗ್ಗೆ ನೀಡಿದ್ದ ಹೇಳಿಕೆ, ಭ್ರಷ್ಟಾಚಾರದ ಬಗೆಗಿನ ಹೇಳಿಕೆಗಳೇ ಸಂಗಣ್ಣ ಕರಡಿಗೆ ಮುಳವಾಗಿವೆ ಅನ್ನೋ ವಿಶ್ಲೇಷಣೆ ಕೇಳಿ ಬರ್ತಿವೆ. ಕೆಲವು ತಿಂಗಳುಗಳ ಹಿಂದೆ ಮಾತ್ನಾಡಿದ್ದ ಸಂಗಣ್ಣ ಕರಡಿ, ಮೋದಿ ವಯಸ್ಸಿನಷ್ಟೇ ನನ್ನ ವಯಸ್ಸು ಕೂಡ. ಪ್ರಧಾನಿ ಮೋದಿಗೆ ಟಿಕೆಟ್ ಕೊಟ್ರೆ ನಮಗೂ ಟಿಕೆಟ್ ಕೊಡ್ಬೇಕು ಅಂತ ಹೇಳಿ ವಿವಾದ ಸೃಷ್ಟಿಸಿದ್ದರು.
ಇದರ ಜೊತೆ ಇತ್ತೀಚೆಗಷ್ಟೇ ಭ್ರಷ್ಟಾಚಾರದ ಬಗ್ಗೆ ವಿವಾದದ ಮಾತಾಡಿದ್ದರು. ನಾನೇನೂ ಹರಿಶ್ಚಂದ್ರನಲ್ಲ. ಜಲಜೀವನ ಮೀಷನ್ ಯೋಜನೆ ಅಕ್ರಮದಲ್ಲಿ ನಾನೂ ಕೂಡ ಭಾಗಿ ಅಂತ ಬಹಿರಂಗವಾಗಿಯೇ ಸಂಗಣ್ಣ ಮಾತ್ನಾಡಿದ್ದು ಬಿಜೆಪಿಗೆ ಮುಜುಗರ ತಂದಿತ್ತು. ಇಷ್ಟೇ ಅಲ್ದೆ, ಬಿಜೆಪಿಯಲ್ಲಿ ಒಮ್ಮೊಮ್ಮೆ ಗುಲಾಮಿತನ ಅನ್ನಿಸಿ ಬಿಡುತ್ತೆ ಅಂತ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿ ರೆಬಲ್ ಆಗಿದ್ದರು ಸಂಗಣ್ಣ ಕರಡಿ. ಈ ಎಲ್ಲಾ ಕಾರಣಗಳಿಂದ ಸಂಗಣ್ಣಗೆ ಬಿಜೆಪಿ ಟಿಕೆಟ್ ಮಿಸ್ ಆಗುತ್ತೆ ಎನ್ನಲಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಸೊಸೆಗೆ ಟಿಕೆಟ್ ತರುವಲ್ಲಿ ಯಶಸ್ವಿಯಾಗಿದ್ದ ಸಂಗಣ್ಣ ಕರಡಿ, ಗೆಲ್ಲಿಸಿಕೊಳ್ಳುವಲ್ಲಿ ಫೇಲ್ ಆಗಿದ್ರು. ಮಂಜುಳಾ ಅಮರೇಶ್ ಕರಡಿ ಅಸೆಂಬ್ಲಿ ಎಲೆಕ್ಷನ್ ನಲ್ಲೇ ಸೋತಿದ್ರು. 2018ರಲ್ಲಿ ಮಗ ಅಮರೇಶ್ ಕರಡಿ ಕೂಡ ಅಸೆಂಬ್ಲಿ ಎಲೆಕ್ಷನ್ ನಲ್ಲಿ ಸೋತಿದ್ರು. ಇದೆಲ್ಲವೂ ಸಂಗಣ್ಣ ಕರಡಿಗೆ ನೆಗೆಟಿವ್ ಆಗಿದೆ. ಈ ಎಲ್ಲಾ ಕಾರಣ ಇಟ್ಕೊಂಡು ಸಂಘ ಪರಿವಾರ ಸಂಗಣ್ಣಗೆ ಟಿಕೆಟ್ ಬೇಡ ಅಂತ ಹೇಳ್ತಿದೆಯಂತೆ.
ಕೊಪ್ಪಳದಿಂದ ಬಿಜೆಪಿ ಅಭ್ಯರ್ಥಿ ಯಾರಾಗ್ತಾರೆ ಅನ್ನೋದೇ ಸದ್ಯ ಹಾಟ್ ಟಾಪಿಕ್ ಆಗ್ತಿದೆ. ಬಿಜೆಪಿಯಲ್ಲಿ ಸಹಜವಾಗಿಯೇ ಹೊಸ ಮುಖಗಳಿಗೆ ಮಣೆ ಹಾಕ್ತಾರೆ ಎನ್ನಲಾಗಿದೆ. ಅದ್ರಂತೆ ಕೊಪ್ಪಳಕ್ಕೂ ಕೂಡ ಹೊಸ ಮುಖಕ್ಕೆ ಟಿಕೆಟ್ ನೀಡಲು ಬಿಜೆಪಿ ತಯಾರಿ ಮಾಡಿಕೊಳ್ತಿದೆಯಂತೆ. ಇತ್ತ ಸಂಗಣ್ಣ ಕರಡಿ ಟಿಕೆಟ್ ಕೈ ತಪ್ಪಿದ್ರೆ ಕಾಂಗ್ರೆಸ್ ಕಡೆ ಮುಖ ಮಾಡ್ತಾರೆ ಎನ್ನಲಾಗ್ತಿದೆ. ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತೆ.