ಹೀಗೂ ಉಂಟು ನೋಡಿ.. ಕಾಡುಗಳ್ಳ ವೀರಪ್ಪನ್ಗೂ ಒಂದು ಸ್ಮಾರಕ ನಿರ್ಮಾಣ ಆಗಿದೆ. ಇದನ್ನು ಪ್ರಮುಖ ರಾಜಕಾರಣಿಯೊಬ್ಬರು ದೊಡ್ಡ ಸಂಭ್ರಮದೊಂದಿಗೆ ಉದ್ಘಾಟಿಸಿದ್ದಾರೆ. ಅಂದ ಹಾಗೇ ಇದು ನಡೆದಿರೋದು ಕರ್ನಾಟಕದಲ್ಲೂ ಅಲ್ಲ.. ನೆರೆಯ ತಮಿಳುನಾಡಿನಲ್ಲಿಯೂ ಅಲ್ಲ. ಕೇರಳದಲ್ಲಿಯೂ ಅಲ್ಲ.. ಮತ್ತೆಲ್ಲಿ ಅಂತೀರಾ? ಇದನ್ನು ತಿಳಿಯೋಕೆ ನೀವು ಈ ಸ್ಟೋರಿ ಓದ್ಲೇಬೇಕು
ಶ್ರೀಗಂಧ ಕಳ್ಳ.. ದಂತ ಚೋರ… ಸ್ಮಗ್ಲರ್ ವೀರಪ್ಪನ್ ಸ್ಮಾರಕವನ್ನು ಆಂಧ್ರದ ಚಿತ್ತೂರು ಜಿಲ್ಲೆ ಕುಪ್ಪಂ ಕ್ಷೇತ್ರದ ಶಾಂತಿಪುರ ಮಂಡಲದ ಅಬಕಲದೊಡ್ಡಿ ಗ್ರಾಮಪಂಚಾಯ್ತಿಯ ಕಾಕರ್ಲವಂಕ ಗ್ರಾಮದಲ್ಲಿ ನಿರ್ಮಿಸಲಾಗಿದೆ.ಈ ಸ್ಮಾರಕವನ್ನು ವೈಎಸ್ಆರ್ ಕಾಂಗ್ರೆಸ್ ಪಕ್ಷ ಪರಿಷತ್ ಸದಸ್ಯ ಭರತ್ ಉದ್ಘಾಟನೆ ಮಾಡಿದ್ದಾರೆ.
ಮೂರು ರಾಜ್ಯಗಳಿಗೆ 90ರ ದಶಕದಲ್ಲಿ ತಲೆನೋವಾಗಿ ಪರಿಣಮಿಸಿದ್ದ ಕಾಡುಗಳ್ಳ ವೀರಪ್ಪನ್ ಅದ್ಹೇಗೆ, ಯಾವ ರೀತಿ ಸ್ಪೂರ್ತಿಯಾದರೋ ಗೊತ್ತಿಲ್ಲ.. ಕಾಕರ್ಲವಂಕ ಗ್ರಾಮದ ಕೆಲ ಯುವಕರು ವೀರಪ್ಪನ್ನನ್ನು ಆದರ್ಶ ಪುರುಷ ಎಂದು ಭಾವಿಸಿ.. ವೀರಪ್ಪನ್ ಸ್ಮರಣಾರ್ಥ ಸ್ಮಾರಕವನ್ನು ನಿರ್ಮಿಸಿದ್ದಾರೆ.
ವೀರಪ್ಪನ್ ಫೋಟೋಗೆ ಹಾರ ತುರಾಯಿ ಹಾಕಿ ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ಪತಾಕೆ ಕೂಡ ಹಾರಿಸಿದ್ದಾರೆ. ಗ್ರಾಮದ ರಾಜಕಾರಣಿಗಳೆಲ್ಲಾ ನಗುತ್ತಾ ವೀರಪ್ಪನ್ ಸ್ಮಾರಕದ ಮುಂದೆ ಪೋಸ್ ನೀಡಿದ್ದಾರೆ.
ಅಂದ ಹಾಗೇ, ಸಾರ್ವತ್ರಿಕ ಚುನಾವಣೆಯ ಜೊತೆ ಜೊತೆಗೆ ಆಂಧ್ರಪ್ರದೇಶದ ಅಸೆಂಬ್ಲಿಗೂ ಚುನಾವಣೆ ನಡೆಯುತ್ತಿದೆ. ಕುಪ್ಪಂ ಕ್ಷೇತ್ರದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಂಎಲ್ಸಿ ಭರತ್ ಹೆಸರು ಘೋಷಣೆ ಆಗಿದೆ.
ಈ ಹಿಂದೆ ಎಂಎಲ್ಸಿ ಭರತ್.. ವೀರಪ್ಪನ್ ನೆರವು ಪಡೆದಿದ್ರು ಎಂಬ ಸುದ್ದಿಯೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕಲಿಗಾಲ. ಕಲಿಗಾಲ!