ನವದೆಹಲಿ: ಕೋಲ್ಕತ್ತದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದ ವೈದ್ಯರಿಗೆ ಕೆಲಸಕ್ಕೆ ಮರಳುವಂತೆ ಸುಪ್ರೀಂ ಕೋರ್ಟ್ ಮನವಿ ಮಾಡಿದ ನಂತರ ನವದೆಹಲಿಯ ಏಮ್ಸ್ ನ ಸ್ಥಾನಿಕ ಡಾಕ್ಟರ್ ಅಸೋಸಿಯೇಷನ್ ನಡೆಸುತ್ತಿದ್ದ 11 ದಿನಗಳ ಮುಷ್ಕರವನ್ನು ಹಿಂತೆಗೆದುಕೊಂಡಿದೆ.
ಸುಪ್ರೀಂ ಕೋರ್ಟ್‌ನ ಮನವಿ ಮತ್ತು ನಿರ್ದೇಶನಕ್ಕೆ ಪ್ರತಿಕ್ರಿಯೆಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವೈದ್ಯರ ಅಸೋಸಿಯೇಷನ್ ಹೇಳಿಕೆಯಲ್ಲಿ ತಿಳಿಸಿದೆ. ರಾಷ್ಟ್ರದ ಹಿತಾಸಕ್ತಿ ಮತ್ತು ಸಾರ್ವಜನಿಕ ಸೇವೆ ಹಿನ್ನೆಲೆಯಲ್ಲಿ AIIMSನ ವೈದ್ಯರ ಸಂಘ 11 ದಿನಗಳ ಮುಷ್ಕರವನ್ನು ವಾಪಸ್ ಪಡೆದುಕೊಂಡಿದೆ. ಅಲ್ಲದೆ RML, IGH ವೈದ್ಯರು ಸಹ ತಮ್ಮ ಮುಷ್ಕರ ಹಿಂಪಡೆದಿದ್ದಾರೆ.
ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಘಟನೆ ಕುರಿತು ಸ್ವಯಂ ಪ್ರೇರಿತ ವಿಚಾರಣೆ ಮತ್ತು ದೇಶಾದ್ಯಂತ ಆರೋಗ್ಯ ಕಾರ್ಯಕರ್ತರ ಸುರಕ್ಷತೆ ಮತ್ತು ಭದ್ರತೆಯ ಸಮಸ್ಯೆಯನ್ನು ಪರಿಹರಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್‌ಗೆ ಪ್ರಾಮಾಣಿಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇವೆ ಎಂದು ಅಸೋಸಿಯೇಷನ್ ತಿಳಿಸಿದೆ.


