Thursday, September 11, 2025
20.3 C
Bengaluru
Google search engine
LIVE
ಮನೆSportsಕೊಟ್ಟ ಮಾತು ಉಳಿಸಿಕೊಂಡ ಕನ್ನಡಿಗ: ಬಡ ವಿದ್ಯಾರ್ಥಿಯ ಫೀಸ್ ಕಟ್ಟಿದ ಕೆಎಲ್ ರಾಹುಲ್

ಕೊಟ್ಟ ಮಾತು ಉಳಿಸಿಕೊಂಡ ಕನ್ನಡಿಗ: ಬಡ ವಿದ್ಯಾರ್ಥಿಯ ಫೀಸ್ ಕಟ್ಟಿದ ಕೆಎಲ್ ರಾಹುಲ್

ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹು ಹೃದಯವಂತ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಹಿಂದೆ ಹಲವು ಚಾರಿಟಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಹಲವರಿಗೆ ನೆರವಾಗಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ. ಅದರಲ್ಲೂ ಬಾಗಲಕೋಟೆಯ ವಿದ್ಯಾರ್ಥಿಯೊಬ್ಬ ಅಮೃತ್ ಮಾವಿನಕಟ್ಟೆ ಅವರ ಕಾಲೇಜ್ ಫೀಸ್ ಭರಿಸುವ ಮೂಲಕ ಗಮನ ಸೆಳೆದಿದ್ದರು. ಇದೀಗ ಅದೇ ಅಮೃತ್ ಅವರ ದ್ವಿತೀಯ ವರ್ಷದ ಶೈಕ್ಷಣಿಕ ಶುಲ್ಕವನ್ನು ಕೆಎಲ್ ರಾಹುಲ್ ಭರಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ನಿವಾಸಿ ಅಮೃತ್ ಮಾವಿನಕಟ್ಟಿ ಅವರು ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿರುವ ಕೆಎಲ್​ಇ ಟೆಕ್ನಾಲಜಿಕಲ್ ಯೂನಿವರ್ಸಿಟಿಯಲ್ಲಿ ಬಿ.ಕಾಮ್ ಮಾಡುತ್ತಿದ್ದಾರೆ. ಇವರ ಮೊದಲ ವರ್ಷದ ಸಂಪೂರ್ಣ ಶುಲ್ಕವನ್ನು ಕೆಎಲ್ ರಾಹುಲ್ ಕಟ್ಟಿದ್ದರು. ಇದೀಗ ದ್ವಿತೀಯ ವರ್ಷದ ಫೀಸ್​ ಅನ್ನು ಸಹ ರಾಹುಲ್ ಭರಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೃತ್ ಮಾವಿನಕಟ್ಟಿ, ಕೆ.ಎಲ್.ರಾಹುಲ್ ಅವರು ಕಳೆದ ವರ್ಷ ಕಾಲೇಜಿಗೆ ಪ್ರವೇಶ ಪಡೆಯಲು ಸಹಕರಿಸಿದ್ದರು. ಅಲ್ಲದೆ ಎರಡನೇ ವರ್ಷವೂ ಆರ್ಥಿಕವಾಗಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಈ ಮಾತಿನಂತೆ ಈಗ ನನ್ನ ಎರಡನೇ ವರ್ಷದ ಅಧ್ಯಯನಕ್ಕಾಗಿ 75,000 ರೂ. ಪಾವತಿಸಿದ್ದಾರೆ ಎಂದು ತಿಳಿಸಿದ್ದಾರೆ.

ನನ್ನ ಅಧ್ಯಯನವನ್ನು ಮುಂದುವರಿಸಲು ಆರ್ಥಿಕವಾಗಿ ಸಹಾಯ ಮಾಡಿದ ಕೆಎಲ್ ರಾಹುಲ್, ಮಂಜುನಾಥ್ ಹೆಬಸೂರು ಮತ್ತು ಬಾಗಲಕೋಟೆಯ ನಿತಿನ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಪ್ರಾಮಾಣಿಕ ಪ್ರಯತ್ನಗಳನ್ನು ಮುಂದುವರಿಸುತ್ತೇನೆ ಎಂದು ಇದೇ ವೇಳೆ ಅಮೃತ್ ಮಾವಿನಕಟ್ಟಿ ಹೇಳಿದ್ದಾರೆ.

ಅಮೃತ್ ಮಾವಿನಕಟ್ಟಿ PUC ನಲ್ಲಿ 600ಕ್ಕೆ 571 ಅಂಕಗಳನ್ನು ಪಡೆದಿದ್ದರು. ಆದರೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಈ ವಿಷಯ ಸಮಾಜ ಸೇವಕ ಮಂಜುನಾಥ್ ಹೆಬಸೂರು ಅವರಿಗೆ ತಿಳಿದು, ನಿತಿನ್ ಅವರ ನೆರವಿನಿಂದ ಕೆಎಲ್ ರಾಹುಲ್ ಅವರಿಂದ ಸಹಾಯಹಸ್ತ ಕೇಳಿದ್ದರು. ಕೂಡಲೇ ರಾಹುಲ್ ಸಂಪೂರ್ಣ ವೆಚ್ಚದ ಹೊಣೆಯನ್ನು ಹೊತ್ತುಕೊಂಡಿದ್ದರು. ಅಲ್ಲದೆ ಅಮೃತ್​ಗೆ ಕೆಎಲ್​ಇ ಟೆಕ್ನಾಲಜಿಕಲ್ ಯೂನಿವರ್ಸಿಟಿಯಲ್ಲಿ ಸೀಟು ಸಿಗುವಂತೆ ನೋಡಿಕೊಂಡಿದ್ದರು. ಇದೀಗ ಅವರ ಎರಡನೇ ವರ್ಷದ ಶೈಕ್ಷಣಿಕ ಶುಲ್ಕವನ್ನು ಕೆಎಲ್ ರಾಹುಲ್ ಭರಿಸಿ ಹೃದಯವಂತಿಕೆ ಮೆರೆದಿದ್ದಾರೆ.

ಇದಕ್ಕೂ ಮುನ್ನ ಕೆಎಲ್ ರಾಹುಲ್ ಧಾರವಾಡದ‌ ಸಿದ್ದೇಶ್ವರ ಕಾಲೋನಿಯಲ್ಲಿ ಬಡ ವಿದ್ಯಾರ್ಥಿನಿಯೊಬ್ಬರ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಿದ್ದರು. ಇದೀಗ ಮತ್ತೊಮ್ಮೆ ಅಮೃತ್ ಅವರಿಗೆ ಸಹಾಯಹಸ್ತ ಮಾಡುವ ಮೂಲಕ ಕೆಎಲ್ ರಾಹುಲ್ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments