ಕಲಬುರಗಿ: ಗುಲಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ಶುಶ್ರೂಷಕಿಯರ ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯರು, ನವಜಾತ ಗಂಡು ಶಿಶುವನ್ನು ಅಪಹರಿಸಿದ ಘಟನೆ ಸೋಮವಾರ ನಡೆದಿದೆ.
ಜಿಲ್ಲಾಸ್ಪತ್ರೆ ವಾರ್ಡ್ ನಂಬರ್ 115 ರಲ್ಲಿ ಕಸ್ತೂರಿ ಎಂಬವರಿಗೆ ಹೆರಿಗೆಯಾಗಿತ್ತು. ನಿನ್ನೆ ನಸುಕಿನ ಜಾವ 4 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ನರ್ಸ್ ವೇಶದಲ್ಲಿ ಬಂದು ಇಬ್ಬರು ಮಹಿಳೆಯರು ಮಗು ಕಿಡ್ನ್ಯಾಪ್ ಮಾಡಿದ್ದಾರೆ.
ರಕ್ತ ತಪಾಸಣೆಗಾಗಿ ಮಗುವನ್ನ ಕರೆದುಕೊಂಡು ಬನ್ನಿ ಅಂತಾ ನಕಲಿ ನರ್ಸ್‌ಗಳು ಹೇಳಿದ್ದರು. ನರ್ಸ್‌ಗಳು ಸಂಪೂರ್ಣವಾಗಿ ಮುಖ ಮುಚ್ಚಿಕೊಂಡು ಬಂದಿದ್ದರು. ಅದರಂತೆ ಮಗುವಿನ ಚಿಕ್ಕಮ್ಮ ಚಂದ್ರಕಲಾ ಮಗುವನ್ನ ರಕ್ತ ತಪಾಸಣೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗುವನ್ನ ನಮಗೆ ಕೊಡಿ ಅಂತಾ ಹೇಳಿದರು. ಬಳಿಕ ಮಗುವನ್ನ ಎತ್ತಿಕೊಂಡು ಎಸ್ಕೇಪ್ ಆಗಿದ್ದಾರೆ.
ಎಷ್ಟು ಹೊತ್ತಾದರು ಅವರು ಬಾರದಿದ್ದ ಕಾರಣ ಮಗುವಿನ ಚಿಕ್ಕಮ್ಮನಿಗೆ ಅನುಮಾನ ಬಂದು ವಿಚಾರಿಸಿದಾಗ ಮಗು ಕಿಡ್ನಾಪ್ ಆಗಿರುವುದು ಕಂಡು ಬಂದಿದೆ. ಚಿಂಚೋಳಿ ತಾಲೂಕಿನ ರಾವೂರ ಗ್ರಾಮದ ರಾಮಕೃಷ್ಣ ಸಾಗರ ಹಾಗೂ ಕಸ್ತೂರಿ ದಂಪತಿ ಶಿಶುವನ್ನು ಅಪಹರಿಸಲಾಗಿದೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮಗು ಅಪಹರಣವಾಗಿರುವ ಪ್ರಕರಣವನ್ನು ದಾಖಲಿಸಿಕೊಂಡಿರುವ ಬ್ರಹ್ಮಪುರ ಠಾಣೆ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಪರಿಶೀಲಿಸಿದಾಗ ಇಬ್ಬರು ಅಪರಿಚಿತ ಮಹಿಳೆಯರು ತಮ್ಮ ಬಟ್ಟೆ ಬದಲಾಯಿಸಿ ಮಗುವನ್ನು ಎತ್ತಿಕೊಂಡು ಹೋಗುತ್ತಿರುವುದು ಪತ್ತೆಯಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಇನ್ನು ವಿಷಯ ತಿಳಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಮಗುವಿನ ಕುಟುಂಬಸ್ಥರನ್ನು ಭೇಟಿ ಮಾಡಿ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಸಚಿವ ಶರಣಪ್ರಕಾಶ್ ಪಾಟೀಲ್ ಮಗುವಿನ ಪತ್ತೆಗಾಗಿ ಪೊಲೀಸ್ ಕಮಮಿಷನರ್ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.