ಸ್ಯಾಂಡಲ್ವುಡ್ ನಿರ್ಮಾಪಕ ಎಂ ಎನ್ ಸುರೇಶ್ ವಿರುದ್ಧ ನಟ ಕಿಚ್ಚ ಸುದೀಪ್ ಹೂಡಿರುವ ಮಾನಹಾನಿ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ನಟ ಕಿಚ್ಚ ಸುದೀಪ್ ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಪ್ರಕರಣ ರದ್ದುಪಡಿಸುವಂತೆ ಕೋರಿ ಸುರೇಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಎಸ್ ವಿಶ್ವಜಿತ್ ಶೆಟ್ಟಿ ನೇತೃತ್ವದ ಏಕಸದಸ್ಯ ಪೀಠ ವಜಾ ಮಾಡಿದೆ.
ದೂರು ಮತ್ತು ಸ್ವಯಂಪ್ರೇರಿತ ಹೇಳಿಕೆಯಲ್ಲಿ ಅರ್ಜಿದಾರರ ವಿರುದ್ಧ ನಿರ್ದಿಷ್ಟ ಆರೋಪಗಳಿವೆ. ಇದು ಸುದೀಪ್ ಗೆ ಮಾನಹಾನಿ ಉಂಟು ಮಾಡಿದೆ. ಸಮಾಜದಲ್ಲಿ ಸುದೀಪ್ ವರ್ಚಸ್ಸಿಗೆ ಹಾನಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ಸಮನ್ಸ್ ಜಾರಿ ಮಾಡಿರುವುದರಲ್ಲಿ ಕಾನೂನುಬಾಹಿರ ನಡೆಯಂತೆ ಕಾಣುತ್ತಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬಹುದು ಎಂಬುದು ವಿಚಾರಣಾಧೀನ ನ್ಯಾಯಾಲಯಕ್ಕೆ ಮೇಲ್ನೋಟಕ್ಕೆ ಅನಿಸಿದ ಕಾರಣ ಇಬ್ಬರೂ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿದೆ. ಸಮನ್ಸ್ ಪಡೆದ ಬಳಿಕ ಅರ್ಜಿದಾರ ಸುರೇಶ್ ಅವರು ವಿಚಾರಣಾಧೀನ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದಾರೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯ ಸಮನ್ಸ್ ಜಾರಿ ಮಾಡಿರುವುದರಲ್ಲಿ ಕಾನೂನುಬಾಹಿರ ನಡೆಯಂತೆ ಕಾಣುತ್ತಿಲ್ಲ ಎಂದಿದೆ.