ಸಿನಿಮಾಸುದ್ದಿ

‘ಕೆಡಿ’ ಸಿನಿಮಾದ ಹಾಡು ವಿವಾದ: ನಿರ್ದೇಶಕ ಪ್ರೇಮ್ ವಿರುದ್ಧ ನೋರಾ ಫತೇಹಿ ಆಕ್ರೋಶ

‘ಕೆಡಿ’ ಸಿನಿಮಾದ “ಸರ್ಸೆ ನಿನ್ನ ಸೆರಗ ಸರ್ಸೆ” ಹಾಡು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಬಾಲಿವುಡ್ ನಟಿ ನೋರಾ ಫತೇಹಿ ನಿರ್ದೇಶಕ ಪ್ರೇಮ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಶ್ಲೀಲ ಸಾಹಿತ್ಯದ ಆರೋಪದ ಬೆನ್ನಲ್ಲೇ, ಈ ವಿಷಯದ ಕುರಿತು ಮೊದಲ ಬಾರಿಗೆ ಮೌನ ಮುರಿದಿರುವ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಈ ಹಾಡಿನ ಕಾರಣದಿಂದ ತಮ್ಮ ಘನತೆಗೆ ಧಕ್ಕೆಯಾಗಿದೆ ಎಂದು ಹೇಳಿರುವ ನೋರಾ, “ನಾನು ಈ ಸಿನಿಮಾದ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ‘ಕೆಡಿ’ ಸಿನಿಮಾದಿಂದ ಹೊರಬರುತ್ತಿರುವುದಾಗಿ ಘೋಷಿಸಿದ್ದಾರೆ.

“ಸಂಜಯ್ ದತ್ ಇದ್ದ ದೊಡ್ಡ ಸಿನಿಮಾ ಎಂಬ ಕಾರಣಕ್ಕೆ ನಾನು ಒಪ್ಪಿಕೊಂಡೆ. ಆದರೆ ಹಾಡಿನಲ್ಲಿ ಇಷ್ಟು ಕೆಟ್ಟ ಸಾಹಿತ್ಯ ಇದೆ ಎಂಬುದು ನನಗೆ ಗೊತ್ತಿರಲಿಲ್ಲ,” ಎಂದು ನೋರಾ ಹೇಳಿದ್ದಾರೆ. ಶೂಟಿಂಗ್ ಸಮಯದಲ್ಲಿ ಹಾಡಿನ ಅರ್ಥ ತಿಳಿಯಲು ಚಿತ್ರತಂಡದ ಮೇಲೆಯೇ ಅವಲಂಬಿಸಿಕೊಂಡಿದ್ದಾಗಿ ಅವರು ಹೇಳಿದ್ದಾರೆ.

“ಅವರು ಭಾಷಾಂತರ ಮಾಡಿದಾಗ ಅಸಭ್ಯ ಎನ್ನುವ ಅಂಶ ನನಗೆ ಕಾಣಿಸಲಿಲ್ಲ. ಆದರೆ ಈಗ ಹಿಂದಿಗೆ ಭಾಷಾಂತರ ಮಾಡಿದಾಗ ಅದು ತುಂಬಾ ಆಕ್ಷೇಪಾರ್ಹವಾಗಿದೆ. ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ನೀಡಲಾಗಿಲ್ಲ, ನನ್ನ ಅನುಮತಿಯನ್ನೂ ಪಡೆಯಲಾಗಿಲ್ಲ,” ಎಂದು ಆರೋಪಿಸಿದ್ದಾರೆ.

ಹಾಡು ಬಿಡುಗಡೆ ವೇಳೆ ತಮ್ಮ ಫೋಟೋ ಬಳಸಿದ ರೀತಿ ಕೂಡ ನೋರಾಳಿಗೆ ಅಸಮಾಧಾನ ತಂದಿದೆ. “ನನ್ನ ಮತ್ತು ಸಂಜಯ್ ದತ್ ಅವರ ಫೋಟೋಗಳನ್ನು ಎಐ ಮೂಲಕ ಸೃಷ್ಟಿಸಿದ್ದಾರೆ. ಇದು ಸರಿಯಲ್ಲ,” ಎಂದು ಅವರು ಹೇಳಿದ್ದಾರೆ.

ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲೇ ತಮಗೆ ಕಿರಿಕಿರಿ ಉಂಟಾದ ಬಗ್ಗೆ ಹೇಳಿದ ಅವರು, “ಅಲ್ಲಿಯೇ ನಿರ್ದೇಶಕ ಪ್ರೇಮ್ ಅವರಿಗೆ ನಾನು ಎಚ್ಚರಿಕೆ ನೀಡಿದ್ದೆ. ನನ್ನ ಘನತೆಗೆ ಧಕ್ಕೆಯಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದೇನೆ,” ಎಂದರು.

ಈ ಘಟನೆ ಸಿನಿಮಾ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ಹರಿದಿದೆ.

Comments (0)

Your email address will not be published. Required fields are marked *

Back to top button