ಬೆಂಗಳೂರು : ಕನ್ನಡ ಚಲನಚಿತ್ರ ಕಪ್ 4ನೇ ಅವೃತ್ತಿಯ ಕ್ರಿಕೆಟ್ ಪಂದ್ಯಾವಳಿಗೆ ಸೋಮವಾರ ತೆರೆಬಿದ್ದಿದೆ. ಫೈನಲ್ ಪಂದ್ಯದಲ್ಲಿ ಸ್ಯಾಂಡಲ್ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಗಂಗಾ ವರಿಯರ್ಸ್, ಶಿವರಾಜ್ ಕುಮಾರ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು ಮಣಿಸಿ ಈ ವರ್ಷದ ಕೆಸಿಸಿ 4 ಕಪ್ ತಮ್ಮದಾಗಿಸಿಕೊಂಡಿದ್ದಾರೆ.
ಗಂಗಾ ವಾರಿಯರ್ಸ್ ತಂಡ 112 ರನ್ ಗುರಿಯನ್ನ ಶಿವಣ್ಣನ ತಂಡಕ್ಕೆ ನೀಡಿತ್ತು. ಇನ್ನು ಶಿವಣ್ಣ ಮತ್ತು ಗಣೇಶ್ ಅವರ ತಂಡವನ್ನು ಕಾಣಲು ಸಾಕಷ್ಟು ಜನರು ಚಿನ್ನಸ್ವಾಮಿ ಸ್ಡೇಡಿಯಂ ನಲ್ಲಿ ನೆರೆದಿದ್ದರು. ಈ ವೇಳೆ ನಟರು ಮೈದಾನದಲ್ಲಿ ಹೆಜ್ಜೆ ಹಾಕಿದ ದೃಶ್ಯ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡಿಸೆಂಬರ್ 24 ರಿಂದ ಡಿಸೆಂಬರ್ 26 ರವರೆಗೆ ನಡೆದ ಅದ್ದೂರಿ ಕನ್ನಡ ಚಲನಚಿತ್ರ ಕಪ್‌ಗೆ ತೆರೆ ಬಿದ್ದಿದೆ. ಶಿವರಾಜ್ ಕುಮಾರ್, ಸುದೀಪ್, ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್, ರಿಯಲ್ ಸ್ಟಾರ್ ಉಪೇಂದ್ರ, ಡಾಲಿ ಧನಂಜಯ ನಾಯಕತ್ವದಲ್ಲಿ ಆರು ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಕೆಸಿಸಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಿನಿಮಾ ತಾರೆಯರಿಗೆ ಸ್ಟಾರ್ ಕ್ರಿಕೆಟಿಗರು ಕೂಡ ಜೊತೆಯಾಗಿದ್ದರು. ಸುರೇಶ್ ರೈನಾ, ಎಸ್ ಬದ್ರಿನಾಥ್, ರಾಬಿನ್ ಉತ್ತಪ್ಪ, ತಿಲಕರತ್ನೆ ದಿಲ್ಷಾನ್, ಹರ್ಷಲ್ ಗಿಬ್ಸ್, ಮುರಳಿ ವಿಜಯ್ ಕೂಡ ಈ ಟೂರ್ನಿಯಲ್ಲಿ ಭಾಗಿಯಾಗಿದ್ದರು. ಗಂಗಾ ವಾರಿಯರ್ಸ್ ಮತ್ತು ರಾಷ್ಟ್ರಕೂಟ ಫ್ಯಾಂಥರ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿ ಗೆದ್ದಿದೆ. 4 ರನ್‌ಗಳ ರೋಚಕ ಗೆಲುವು ಸೋಮವಾರ ನಡೆದ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಗಂಗಾ ವಾರಿಯರ್ಸ್ ತಂಡವು ಹೊಯ್ಸಳ ಈಗಲ್ಸ್ ವಿರುದ್ಧ 10 ರನ್‌ಗಳ ಜಯ ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿತ್ತು. ಅಂತಿಮ ಗುಂಪು ಹಂತದ ಪಂದ್ಯದಲ್ಲಿ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡ ಕದಂಬ ಲಯನ್ಸ್ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆಯಿತು.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ರಾಷ್ಟ್ರಕೂಟ ಪ್ಯಾಂಥರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಅವಿನಾಶ್ 12 ಎಸೆತಗಳಲ್ಲಿ 40 ರನ್ ಗಳಿಸುವ ಮೂಲಕ ಗಂಗಾ ವಾರಿಯರ್ಸ್ 10 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 111 ರನ್ ಕಲೆ ಹಾಕಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ರಾಷ್ಟ್ರಕೂಟ ಪ್ಯಾಂಥರ್ಸ್ ಆಕ್ರಮಣಕಾರಿಯಾಗಿ ಇನ್ನಿಂಗ್ಸ್ ಪ್ರಾರಂಭಿಸಿ, ಮೊದಲ 5 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 53 ರನ್ ಗಳಿಸಿ ಗೆಲುವಿನ ಭರವಸೆ ಮೂಡಿಸಿದರು. ಆದರೂ ಗಂಗಾ ವಾರಿಯರ್ಸ್ ಬೌಲರ್‌ಗಳು ಉಳಿದ ಓವರ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಅಂತಿಮವಾಗಿ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು 107 ರನ್‌ಗಳಿಗೆ ಕಟ್ಟಿಹಾಕುವ ಮೂಲಕ 4 ರನ್‌ಗಳ ರೋಚಕ ಗೆಲುವು ಸಾಧಿಸಿದ ಗೋಲ್ಡನ್ ಸ್ಟಾರ್ ಗಣೇಶ್ ಪಡೆ ಗೆಲುವು ಸಾಧಿಸಿತ್ತು.
ಫೈನಲ್ ಪಂದ್ಯಕ್ಕೆ ಮುನ್ನ ಚಂದನವನದ ತಾರೆಗಳು ಮನರಂಜನಾ ಕಾರ್ಯಕ್ರಮ ನೆರೆದಿದ್ದ ಅಭಿಮಾನಿಗಳನ್ನು ಮನರಂಜಿಸಿದ್ದರು. ಕನ್ನಡ ಚಿತ್ರರಂಗದ ಪ್ರಮುಖ ನಟಿಯರು, ತಂತ್ರಜ್ಞರು ಕೂಡ ಹಾಜರಿದ್ದರು. ಫೈನಲ್ ಪಂದ್ಯದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೂಡ ಈ ಸಂಭ್ರಮದಲ್ಲಿ ಪಾಲ್ಗೊಂಡರು.