
ಬೆಂಗಳೂರು: ರಾಜ್ಯದ ಬೆನ್ನೆಲುಬಾದ ಪಶುಪಾಲಕರು ಮತ್ತು ಹೈನುಗಾರರ ಏಳಿಗೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್ನಲ್ಲಿ ಹತ್ತಾರು ವಿನೂತನ ಯೋಜನೆಗಳನ್ನು ಘೋಷಿಸಿದ್ದಾರೆ. ರಾಜ್ಯದಲ್ಲಿ ಹಾಲಿನ ಸಂಗ್ರಹಣೆ ದಿನಕ್ಕೆ ದಾಖಲೆಯ ಒಂದು ಕೋಟಿ ಲೀಟರ್ ದಾಟಿದ್ದು, ರೈತರಿಗೆ ಬಾಕಿ ಇದ್ದ 609 ಕೋಟಿ ರೂ. ಪ್ರೋತ್ಸಾಹಧನ ಬಿಡುಗಡೆ ಮಾಡಲಾಗಿದೆ. ವಿಶೇಷವಾಗಿ ಜಾನುವಾರುಗಳ ರೋಗ ಪತ್ತೆಗಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಸಿಟಿ ಸ್ಕ್ಯಾನಿಂಗ್ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಬಜೆಟ್ನ ಮುಖ್ಯಾಂಶಗಳು:
ಜಾನುವಾರುಗಳಿಗೆ ಸಿಟಿ ಸ್ಕ್ಯಾನ್: ಬೆಂಗಳೂರು ಮತ್ತು ಬೀದರ್ ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ಹಸು, ಎಮ್ಮೆಗಳ ರೋಗ ಪತ್ತೆಗೆ CT ಸ್ಕ್ಯಾನಿಂಗ್ ಕೇಂದ್ರ ಸ್ಥಾಪನೆ!
ಹಸು/ಕುರಿ ಖರೀದಿಗೆ ಸಹಾಯಧನ: 20,000 ಫಲಾನುಭವಿಗಳಿಗೆ ಹಸು, ಎಮ್ಮೆ ಹಾಗೂ ಕುರಿ/ಮೇಕೆ ಖರೀದಿಸಲು ಶೇ.25 ರಷ್ಟು ಸಹಾಯಧನ ಘೋಷಣೆ.
ಫಲಧಾರೆ ಶಿಬಿರ: “ವರ್ಷಕ್ಕೊಂದು ಕರು” ಗುರಿಯೊಂದಿಗೆ 1,000 ಗ್ರಾಮ ಪಂಚಾಯಿತಿಗಳಲ್ಲಿ ‘ಫಲಧಾರೆ’ ವಿಶೇಷ ಶಿಬಿರಗಳ ಆಯೋಜನೆ.
ಹೊಸ ಪಾಲಿಕ್ಲಿನಿಕ್ಗಳು: 15 ತಾಲ್ಲೂಕು ಪಶು ಆಸ್ಪತ್ರೆಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಪಾಲಿಕ್ಲಿನಿಕ್ಗಳನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧಾರ.
ತಳಿ ಸಂವರ್ಧನಾ ಕೇಂದ್ರ: ಮೈಸೂರಿನಲ್ಲಿ ಬೋಯರ್ ಮೇಕೆ ತಳಿ ಕೇಂದ್ರ ಹಾಗೂ ಪಿರಿಯಾಪಟ್ಟಣದಲ್ಲಿ ಬಂಡೂರು ಕುರಿ ತಳಿ ಕೇಂದ್ರದ ಸಮಗ್ರ ಅಭಿವೃದ್ಧಿ.
ಶ್ವಾನ ಸಂತಾನ ನಿಯಂತ್ರಣ: ಬೀದಿ ನಾಯಿಗಳ ಸಮಸ್ಯೆ ತಡೆಯಲು ಬೆಂಗಳೂರು ಮತ್ತು ಬೀದರ್ನಲ್ಲಿ ಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರ ಸ್ಥಾಪನೆ.
ನಬಾರ್ಡ್ ಸಹಯೋಗ: ಮುಂದಿನ ವರ್ಷ ರಾಜ್ಯಾದ್ಯಂತ ಪಶುವೈದ್ಯಕೀಯ ಸಂಸ್ಥೆಗಳಿಗೆ 100 ನೂತನ ಕಟ್ಟಡಗಳ ನಿರ್ಮಾಣ.



