ಬೆಳ್ಳಿ ಗೆದ್ದು ಇತಿಹಾಸ ಬರೆದ ಕಾರ್ಕಳದ ಪ್ರತಿಭೆ: ಬ್ಯಾಡ್ಮಿಂಟನ್ನಲ್ಲಿ ಆಯುಷ್ ಶೆಟ್ಟಿ ದಾಖಲೆ!

ಚೀನಾದ ನಿಂಗ್ಬೋದ ನಗರದಲ್ಲಿ ನಡೆದ ‘ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ 2026’ರಲ್ಲಿ ಕಾರ್ಕಳದ ಪ್ರತಿಭೆ ಆಯುಷ್ ಶೆಟ್ಟಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಸುದೀರ್ಘ 61 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ. ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಆಟಗಾರ, ಚೀನಾದ ಶಿ ಯುಕಿ ವಿರುದ್ಧ ಸೆಣಸಾಡಿ ಸೋಲೊಪ್ಪಿಕೊಂಡರೂ, ಏಷ್ಯಾ ಚಾಂಪಿಯನ್ಶಿಪ್ನ ಪುರುಷರ ಸಿಂಗಲ್ಸ್ನಲ್ಲಿ 1965ರ ನಂತರ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಆಯುಷ್ ಪಾತ್ರರಾಗಿದ್ದಾರೆ. ವಿಶೇಷವೆಂದರೆ, ಸೆಮಿಫೈನಲ್ನಲ್ಲಿ ವಿಶ್ವದ ನಂ.1 ಆಟಗಾರ ಹಾಗೂ ಹಾಲಿ ವಿಶ್ವ ಚಾಂಪಿಯನ್ ಕುನ್ಲವುಟ್ ವಿಟಿಡ್ಸರ್ನ್ ಅವರಿಗೆ ಆಘಾತ ನೀಡುವ ಮೂಲಕ ಆಯುಷ್ ಕ್ರೀಡಾಲೋಕದಲ್ಲಿ ಸಂಚಲನ ಮೂಡಿಸಿದ್ದರು.
20 ವರ್ಷದ ಈ ಉದಯೋನ್ಮುಖ ತಾರೆ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರಾಗಿದ್ದು, ತಮ್ಮ 8ನೇ ವಯಸ್ಸಿನಲ್ಲೇ ಬ್ಯಾಡ್ಮಿಂಟನ್ ಆಡಲು ಆರಂಭಿಸಿದ್ದರು. 6 ಅಡಿ 4 ಇಂಚು ಎತ್ತರವಿರುವ ಆಯುಷ್, ತಮ್ಮ ಭರ್ಜರಿ ಸ್ಮ್ಯಾಶ್ಗಳ ಮೂಲಕ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಈ ಹಿಂದೆ 2023ರ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಕಂಚು ಹಾಗೂ ಯುಎಸ್ ಓಪನ್ ಸೂಪರ್ 300ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಇವರು, ಇದೀಗ ಏಷ್ಯಾ ಮಟ್ಟದಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಮಲೆನಾಡಿನ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಆಯುಷ್, ಹಿರಿಯ ತರಬೇತುದಾರರಾದ ವಿಮಲ್ ಕುಮಾರ್ ಮತ್ತು ಸಾಗರ್ ಚೋಪ್ರಾ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದು, ಭಾರತೀಯ ಬ್ಯಾಡ್ಮಿಂಟನ್ನ ಮುಂದಿನ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
AyushShetty, #Badminton ,#Karkala ,#ProudIndian ,#SilverMedalist ,#SportsAchievement, #TeamIndia ,#BadmintonPlayer, #KarnatakaTalent ,#NewRecord, #IndianSports,




