ಬೆಂಗಳೂರು: ನಟ ಧನುಷ್ ಹಾಗೂ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಇತ್ತೀಚೆಗೆ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅಕ್ಟೋಬರ್ 7ರಂದು ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ. ಈ ಸಂಬಂಧ ನೋಟಿಸ್ ನೀಡಿರುವುದಾಗಿ ವರದಿಯಾಗಿದೆ.
ಪರಸ್ಪರ ಒಪ್ಪಿಗೆ ಮೇರೆಗೆ ಜೋಡಿ ವಿಚ್ಛೇದನ ಸಲ್ಲಿಸಿತ್ತು. ಕಳೆದ ಎರಡು ವರ್ಷಗಳಿಂದ ಧನುಷ್ ಮತ್ತು ಐಶ್ವರ್ಯ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಧನುಷ್ ಹಾಗೂ ಐಶ್ವರ್ಯಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಮದುವೆಯಾಗಿ ಬರೋಬ್ಬರಿ 18 ವರ್ಷಗಳ ಬಳಿಕ ದೂರಾಗುತ್ತಿರುವುದಾಗಿ ಹೇಳಿದ್ದರು. ವಿಚ್ಛೇದನ ವಿಚಾರ ಘೋಷಣೆ ಬಳಿಕ ಇಬ್ಬರು ತಮ್ಮ ಮಕ್ಕಳಾದ ಯಾತ್ರಾ ಮತ್ತು ಲಿಂಗ ಶಾಲೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.
ಜನವರಿ 2022ರಲ್ಲಿ ಬೇರೆಯಾಗುತ್ತಿದ್ದೇವೆ ಎಂದು ದಂಪತಿ ಘೋಷಿಸಿದ್ದರು. “18 ವರ್ಷಗಳ ಕಾಲ ಸ್ನೇಹಿತರು, ದಂಪತಿಗಳಾಗಿ , ಪೋಷಕರಾಗಿ ಹಿತೈಷಿಗಳಾಗಿ ಒಟ್ಟಿಗೆ ಇದ್ದೆವು. ಈ ಪಯಣ ನಮ್ಮಿಬ್ಬರ ಪ್ರಗತಿ, ತಿಳಿವಳಿಕೆ, ಹೊಂದಾಣಿಕೆ ಮತ್ತು ಪರಸ್ಪರ ಸ್ವೀಕಾರದ ಹಾದಿಯಾಗಿತ್ತು. ಇಂದು ನಾವು ನಮ್ಮ ಪ್ರತ್ಯೇಕ ಮಾರ್ಗಗಳನ್ನು ಕಂಡುಕೊಂಡಿದ್ದೇವೆ. ಐಶ್ವರ್ಯಾ ಮತ್ತು ನಾನು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ಹಿಡಿಯಲಿದೆ.
ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ. ಓಂ ನಮಶಿವಾಯ” ಎಂದು ಒಂದೂವರೆ ವರ್ಷದ ಹಿಂದೆ ಧನುಷ್ ಟ್ವೀಟ್ ಮಾಡಿದ್ದರು. ಹಿರಿಯ ನಟ ರಜನಿಕಾಂತ್ ಅವರ ಪುತ್ರಿ ಧನುಷ್ ಮತ್ತು ಐಶ್ವರ್ಯಾ ಅವರು 2004ರಲ್ಲಿ ವಿವಾಹವಾಗಿದ್ದರು. ಇಬ್ಬರೂ ಮತ್ತೆ ಒಂದಾಗಬೇಕು ಎಂದು ಆಪ್ತರು, ಅಭಿಮಾನಿಗಳು ಬಯಸಿದ್ದರು. ಆದರೆ ಈಗ ಸದ್ಯದಲ್ಲೇ ಇವರ ವಿಚ್ಛೇದನ ಅಂತಿಮಗೊಳ್ಳಲಿದೆ. ಈ ವಿಚಾರದಲ್ಲಿ ಅಭಿಮಾನಿಗಳಿಗೆ ನಿರಾಸೆಯಾಗಿದೆ.